ಜಿಲ್ಲೆ

ಸಂಭ್ರಮದ ಆಂಜನೇಯ ಸ್ವಾಮಿ ರಥೋತ್ಸವ

Davangere - Desk - Ganesh M K

ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಗುರುವಾರ ಸಂಜೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇಗುಲದಲ್ಲಿ ಮುಂಜಾನೆಯಿಂದಲೂ ಧಾರ್ಮಿಕ ಕಾರ್ಯಗಳು ನೆರವೇರಿದವು. ಬೆಳಗ್ಗೆಯಿಂದಲೇ ಭಕ್ತರು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಭಕ್ತರು ಹರಕೆ ಸಲ್ಲಿಸಿದರು.

ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಯನ್ನು ತೇರಿನ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು ತೂರಿದರು.

ಮುಖ್ಯಬೀದಿಯಲ್ಲಿ ಸಾಗಿ ಪಾದಗಟ್ಟೆ ಮುಟ್ಟಿಸಿದ ನಂತರ ಅಲ್ಲಿ ಪೂಜೆ ನೆರವೇರಿಸಲಾಯಿತು. ಶ್ರೀರಾಮ ಭಂಟ ಹನುಮಂತನಿಗೆ ಉಘೇ..ಉಘೇ.. ಎಂದು ಜೈಘೋಷ ಹಾಕಿ ಭಕ್ತರು ತೇರನೆಳೆದರು.

ಸಮಾಳ, ಡೊಳ್ಳು, ಡಿಜೆ ಸಂಗೀತದಲ್ಲಿ ಶ್ರೀರಾಮ ಮತ್ತು ಹನುಮನ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ಕೊಟ್ಟೂರು, ಉಜ್ಜಿನಿ, ದಾವಣಗೆರೆ, ಜಗಳೂರು ಮತ್ತಿತರ ಕಡೆಗಳ ಭಕ್ತರು ಪಾಲ್ಗೊಂಡಿದ್ದರು.