ವಿಜಯನಗರ: ಶ್ರೀರಾಮ ಭಂಟ ಹನುಮಂತನ ಜನ್ಮಭೂಮಿ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದನ್ನು ಖಂಡಿಸಿ ಆಂಧ್ರ ಪ್ರದೇಶದ ಟಿಟಿಡಿ ವಿರುದ್ಧ ಹಂಪಿಯ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಟಿಡಿಯು ಹನುಮನ ಜನ್ಮ ಕುರಿತ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದೆ. ಎಂಟು ತಿಂಗಳ ಹಿಂದೆ ವಿದ್ವಾಂಸರು ಈ ದಾಖಲೆಗಳಿಗೆ ಒಪ್ಪಿಗೆ ನೀಡಿ ಎಂದು ಹಿಂದೆ ಬಿದ್ದಿದ್ದರು. ಆದರೆ, ನಾವು ಅದರ ಅಪ್ರಾಮಾಣಿಕ ಗ್ರಂಥಗಳಿಗೆ ಒಪ್ಪಿಗೆ ನೀಡಲು ಹೋಗಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಟಿಟಿಡಿ ಇಡೀ ಸಮಾಜದ ಭಕ್ತರನ್ನು ದಾರಿತಪ್ಪಿಸುವ ಮತ್ತು ಮೋಸ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಹನುಮ ಜನ್ಮ ಸ್ಥಳ ಅಂಜನಾದ್ರಿಯಲ್ಲಿಯೇ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದು ಹೇಳಿದರು.
ತಿರುಮಲ ತಿರುಪತಿ ಅವರು ಹೇಳುತ್ತಿರುವುದು ಅಸತ್ಯವಾಗಿದೆ. ಹನುಮಾನ್ ಅಂಜನಾದ್ರಿಯಲ್ಲಿ ಹುಟ್ಟಿರುವುದು ಯಾವುದೇ ಸಂಶಯವಿಲ್ಲ. ಈ ಬೆಟ್ಟದಲ್ಲಿ ಅಂಜನಿಯಮ್ಮ ತಪಸ್ಸು ಮಾಡಿರುವ ಕುರಿತು ಉಲ್ಲೇಖಗಳಿವೆ. ಅಲ್ಲಿ 50 ಗುಹೆಗಳಿವೆ. ಇಲ್ಲಿಯೇ ಹನುಮಾನ್ ಹುಟ್ಟಿರುವುದು ಎಲ್ಲರೂ ತಿಳಿದಿದೆ ಎಂದರು. (ದಿಗ್ವಿಜಯ ನ್ಯೂಸ್)