ಬೀರೂರು: ಹಾವೇರಿ ಜಿಲ್ಲೆ ಬ್ಯಾಡಗಿ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ 13 ಜನರು ಮೃತಪಟ್ಟಿದ್ದು, ಅದರಲ್ಲಿ ಬೀರೂರಿನ ಶಿವಾಜಿನಗರ ಬಡಾವಣೆಯ ಓರ್ವ ಗೃಹಿಣಿ ಮತ್ತು ಆಕೆಯ ಇಬ್ಬರು ಮಕ್ಕಳೂ ಸೇರಿದ್ದಾರೆ.
ಬೀರೂರಿನ ರಾಘವೇಂದ್ರ ಪವಾರ್ ಅವರ ಪತ್ನಿ ಅಂಜಲಿ (30) ಮಕ್ಕಳಾದ ಆರ್ಯ (4) ಮತ್ತು ನಂದನ್ (3) ಮೃತಪಟ್ಟವರು. ಅಂಜಲಿ ತಮ್ಮ ತವರು ಮನೆ ಭದ್ರಾವತಿಯ ಎಮ್ಮೆಹಟ್ಟಿಗೆ ತೆರಳಿದ್ದರು. ಅಲ್ಲಿಂದ ಸಂಬಂಧಿಕರ ಜತೆ ತುಳಜಾಪುರ ಮತ್ತು ಸವದತ್ತಿಯಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರುವಾಗ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ದುರ್ಘಟನೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಮ್ಮ ರಾಘವೇಂದ್ರ ಹಾಗೂ ನನ್ನದು ಕೂಡು ಕುಟುಂಬವಾಗಿತ್ತು. ಭದ್ರಾವತಿಯ ತವರು ಮನೆಗೆ ಭಾನುವಾರವೇ ಹೊರಟಿದ್ದ ನಾದಿನಿ ಅಂಜಲಿಯನ್ನು ತಡೆದು ನಾಳೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ಉಳಿದು ಸೋಮವಾರ ಹೊರಟರು. ಅದರೆ ದೇವರ ದರ್ಶನಕ್ಕೆ ಹೋದವರು ವಾಪಸ್ ಮನೆಗೆ ಬರಲಿಲ್ಲ. ಬೆಳಗ್ಗಿನಿಂದ ಮನೆಯಲ್ಲಿ ಯಾರೂ ಊಟ ತಿಂಡಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಂಜಲಿ ಭಾವ ಲೋಕನಾಥ್ ಪವಾರ್ ಆಕ್ರಂದನ ವ್ಯಕ್ತಪಡಿಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಬೀರೂರಿಗೆ ತರಲಾಗುತ್ತಿದ್ದು, ಇಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ನಿಶ್ಚಯಿಸಲಾಗಿದೆ ಎಂದರು.