ಜಿಲ್ಲೆ

ಶಾಸಕಿ ಅಂಜಲಿ ನಿಂಬಾಳ್ಕರ್ ಕನ್ನಡಿಗರ ಕ್ಷಮೆ ಕೇಳಲಿ

ಬೆಳಗಾವಿ: ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಮಣಗುತ್ತಿ ಘಟನೆಯ ಸತ್ಯಾಸತ್ಯತೆ ತಿಳಿಯದೆ ಕೇವಲ ಮರಾಠಿಗರ ಓಲೈಕೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರಿಗೆ ಅವಮಾನ ಮಾಡಿದ್ದು, ಅವರು ಕೂಡಲೇ ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಕರವೇ
ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಶಾಸಕಿಯ ಟ್ವೀಟ್ ಖಂಡಿಸಿ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕಿ ಅಂಜಲಿ, ಮಣಗುತ್ತಿಯ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದು ಬಳಿಕ ಟ್ವೀಟ್ ಮಾಡಬಹುದಿತ್ತು. ಆದರೆ, ಮಹಾ ಸರ್ಕಾರದ ಪರವಾಗಿ ಧೋರಣೆ ವ್ಯಕ್ತಪಡಿಸಿ, ಕನ್ನಡನಾಡಿಗೆ ದ್ರೋಹ ಬಗೆದಿದ್ದಾರೆ. ಅಲ್ಲದೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡಿಗರಿಂದ ಶಿವಾಜಿ ಮೂರ್ತಿಗೆ ಅವಮಾನವಾಗಿಲ್ಲ. ಮೂರ್ತಿ ಪ್ರತಿಷ್ಠಾಪನೆ ಮಾಡಿದವರೇ ಮೂರ್ತಿಯನ್ನು ತೆರವು ಮಾಡಿದ್ದಾರೆ. ಹೀಗಾಗಿ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಜಿಲ್ಲಾದ್ಯಂತ ಸಂಘಟನೆ ಮೂಲಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಕ್ಷಮೆ ಯಾಚಿಸಿ

ಖಾನಾಪುರ: ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಕ್ಷಮೆಯಾಚಿಸಲು ಆಗ್ರಹಿಸಿದ ಸ್ಥಳೀಯ ಶಾಸಕಿ
ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ತಾಲೂಕು ಕರವೇ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ತಾಲೂಕು
ಘಟಕದ ಉಪಾಧ್ಯಕ್ಷ ವಿಠ್ಠಲ ಹಿಂಡಲಕರ್, ಕನ್ನಡದ ನೆಲದಲ್ಲಿ ಅಧಿಕಾರ ಅನುಭವಿಸುತ್ತಿರುವ ಶಾಸಕಿ, ಕರ್ನಾಟಕ ಸರ್ಕಾರದಿಂದಲೇ ಕ್ಷಮೆ ಅಪೇಕ್ಷಿಸುವುದು ಸೂಕ್ತವಾದುದಲ್ಲ.

ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಮರಾಠಿ ಮತದಾರರ ಓಲೈಕೆಗಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದು, ಕನ್ನಡ ನಾಡು-ನುಡಿಗೆ ದ್ರೋಹವೆಸಗಿದ್ದಾರೆ. ಅವರು ಕೂಡಲೇ ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.