ಜಿಲ್ಲೆ

ಮೈಸೂರು ಮೃಗಾಲಯದಲ್ಲಿ ಪ್ರಾಣಿಪಕ್ಷಿಗಳು ಕೂಲ್... ಕೂಲ್...!

ಮಂಜುನಾಥ ತಿಮ್ಮಯ್ಯ ಮೈಸೂರು


ಕೆಂಡದಂತಹ ಉರಿ ಬಿಸಿಲಿನ ಧಗೆಯಿಂದ ಪ್ರಾಣಿ-ಪಕ್ಷಿ ಸಂಕುಲವನ್ನು ಸಂರಕ್ಷಿಸಲು ನಗರದ ಚಾಮರಾಜೇಂದ್ರ ಮೃಗಾಲಯ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ.

ನೀರಿನ ಜೆಟ್‌ಗಳು, ಸಿಂಪಡಿಸುವ ಯಂತ್ರ ಅಳವಡಿಕೆ, ಫ್ಯಾನ್, ಏರ್‌ಕೂಲರ್‌ಗಳ ವ್ಯವಸ್ಥೆ, ಬೇಸಿಗೆ ಆಹಾರ ಪದ್ಧತಿ, ಕೆಸರಿನ ಕೊಳ, ನೆರಳಿಗಾಗಿ ಚಪ್ಪರಗಳ ವ್ಯವಸ್ಥೆ ಹೀಗೆ ವಿವಿಧ ಕ್ರಮ ಅನುಸರಿಸಿದ್ದು, ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಆಹಾರ ಪೂರೈಸುವ ಮೂಲಕ ಪ್ರಾಣಿ-ಪಕ್ಷಿಗಳನ್ನು ಬೇಸಿಗೆಯಿಂದ ರಕ್ಷಣೆ ಮಾಡಲಾಗುತ್ತಿದೆ.

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನ-ಜಾನುವಾರುಗಳು ಮಾತ್ರವಲ್ಲದೆ ವನ್ಯಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಗರದಲ್ಲಿ ಕಳೆದ ಕೆಲವು ದಿನಗಳಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದ ಜನರು ಬಸವಳಿದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೃಗಾಲಯದಲ್ಲಿರುವ 1200ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳನ್ನು ಬಿಸಿಲಿನ ಬೇಗೆಯಿಂದ ಸಂರಕ್ಷಿಸುವುದು ಸವಾಲಿನ ಕೆಲಸವಾಗಿದೆ.


ನೀರಿನೊಂದಿಗೆ ಆನೆ, ಜಿರಾಫೆ, ಕಾಡೆಮ್ಮೆ ಚಿನ್ನಾಟ:


ಮೃಗಾಲಯದಲ್ಲಿರುವ ಆನೆ, ಜಿರಾಫೆ, ಕಾಡೆಮ್ಮೆ, ಚಿಂಪಾಂಜಿ, ಗೊರಿಲ್ಲಾ, ಒರಾಂಗೂಟಾನ ಸೇರಿದಂತೆ ಇನ್ನಿತರ ಪ್ರಾಣಿಗಳ ವಿಶ್ರಾಂತಿ ತಾಣದಲ್ಲಿ ಬಿಸಿಲಿನ ಬೇಗೆ ತಣಿಸಲು ಸಹಕರಿಸುವ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ದಿನಕ್ಕೆ ಮೂರು ಬಾರಿ ನೀರನ್ನು ಸ್ಪ್ರಿಂಕ್ಲರ್ ಮೂಲಕ ನೀರನ್ನು ಚಿಮುಕಿಸುವ ಮೂಲಕ ವಾತಾವರಣ ತಂಪಾಗಿಸಲಾಗುತ್ತಿದೆ. ಇದರಿಂದ ಅಲ್ಲಿರುವ ಪ್ರಾಣಿಗಳು ಜಿನುಗುವ ನೀರಿನೊಂದಿಗೆ ಚಿನ್ನಾಟವಾಡುತ್ತಿವೆ.


ಪ್ರಾಣಿಗಳಿಗೆ ಏರ್ ಕೂಲರ್ ವ್ಯವಸ್ಥೆ


ಅಪರೂಪದ ಪಕ್ಷಿ ಸಂಕುಲ, ವಿದೇಶಿ ಪಕ್ಷಿಗಳಿರುವ ಬೋನು(ಮನೆ)ಗಳಲ್ಲಿ ಪಕ್ಷಿಗಳ ಮೇಲೆ ನೀರು ಸಿಂಪಡಿಸಲು ಫಾಗರ್‌ಗಳನ್ನು ಬಳಸಲಾಗಿದೆ. ಸ್ಪ್ರಿಂಕ್ಲರ್‌ಗಳಲ್ಲಿ ನೀರು ರಭಸವಾಗಿ ಚಿಮ್ಮುವುದರಿಂದ ಪಕ್ಷಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಏರ್ ಕೂಲರ್ ಮಾದರಿಯಲ್ಲಿ ಫಾಗರ್ ಅಳವಡಿಸಲಾಗಿದ್ದು, ನೀರಿನ ಅಂಶ ಗಾಳಿಯಲ್ಲಿ ನಿಧಾನವಾಗಿ ಹರಡುವುದರಿಂದ ಪಕ್ಷಿಗಳಿರುವ ಮನೆಗಳು ತಂಪಾಗಿರುತ್ತವೆ. ಇದರಿಂದ ಪಕ್ಷಿಗಳು ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆದುಕೊಂಡಂತಾಗಿದೆ. ಪಕ್ಷಿಗಳು ಲವಲವಿಕೆಯಿಂದ ಕೂಡಿವೆ. ಪ್ರವಾಸಿಗರು ಪಕ್ಷಿಗಳನ್ನು ಕಂಡು ಸಂಭ್ರಮಿಸುತ್ತಿದ್ದಾರೆ.


ಕೆಸರಿನ ಗುಂಡಿಯಲ್ಲಿ ಪ್ರಾಣಿಗಳ ಆಟ:


ಬಿಸಿಲಿನಿಂದ ದೇಹ ತಣಿಸಿಕೊಳ್ಳಲು ಸಸ್ಯಾಹಾರಿ ಪ್ರಾಣಿಗಳಿಗೆ ಕೆಸರಿನ ಗುಂಡಿಗಳನ್ನು ನಿರ್ಮಿಸಲಾಗಿದೆ. ಜಿಂಕೆ, ಸಾಂಬರ್, ಆನೆ ಇನ್ನಿತರ ಪ್ರಾಣಿಗಳಿರುವ ಸ್ಥಳದಲ್ಲಿ ನೆರಳಿರುವ ಜಾಗದಲ್ಲಿ ಕೆಸರು ಇರುವಂತೆ ಗುಂಡಿ ನಿರ್ಮಿಸಿ, ನೀರು ಸರಬರಾಜು ಮಾಡಲಾಗಿದೆ. ಇದರಿಂದ ಬಿಸಿಲು ಹೆಚ್ಚಾಗುತ್ತಿದ್ದಂತೆ ಈ ಪ್ರಾಣಿಗಳು ಕೆಸರಿನ ಗುಂಡಿಯಲ್ಲಿ ವಿರಮಿಸಿ ದೇಹವನ್ನು ತಂಪಾಗಿ ಇಟ್ಟುಕೊಳ್ಳುತ್ತಿವೆ.


ಎಳನೀರು, ಗ್ಲೂಕೋಸ್, ಕಲ್ಲಂಗಡಿ ವಿತರಣೆ:


ಗೊರಿಲ್ಲಾ, ಚಿಂಪಾಂಜಿ, ಒರಾಂಗೂಟಾನ ಸೇರಿದಂತೆ ಕೋತಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಆಹಾರದೊಂದಿಗೆ ಎಳನೀರು, ಗ್ಲೂಕೋಸ್, ಒಆರ್‌ಎಸ್, ಕರ್ಬೂಜಾ, ಕಲ್ಲಂಗಡಿ ಹಣ್ಣು, ಪರಂಗಿ ಹಣ್ಣು , ಕರಡಿಗಳಿಗೆ ಐಸ್‌ಕ್ಯೂಬ್, ನೀರಿನ ಅಂಶವುಳ್ಳ ಹಣ್ಣುಗಳನ್ನು ಹೆಚ್ಚಾಗಿ ನೀಡಲಾಗುತ್ತಿದೆ. ಸಸ್ಯಾಹಾರಿ ಪ್ರಾಣಿಗಳಿಗೆ ಹಸಿ ಹುಲ್ಲು, ವಿವಿಧ ಹಸಿ ಸೊಪ್ಪು ನೀಡಲಾಗುತ್ತಿದೆ.

ಛಾವಣಿಯಲ್ಲಿ ಗಾರ್ಡನ್:


ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ಪ್ರಾಣಿಗಳಿರುವ ಮನೆಗಳ ಮೇಲೆ ಟೆರೆಸ್ ಗಾರ್ಡನ್ ಬೆಳೆಸಲಾಗುತ್ತಿದ್ದು, ಇದರಿಂದ ಛಾವಣಿಯಲ್ಲಿ ಬಿಸಿಲಿನ ತಾಪ ಕಡಿಮೆಗೊಳಿಸಲಾಗುತ್ತಿದೆ.


ಹುಲಿ, ಸಿಂಹ, ಗೊರಿಲ್ಲಾ, ಚಿಂಪಾಂಜಿಗಳಿರುವ ಮನೆಗಳ ಮೇಲಿನ ತಾರಸಿಯಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣನ್ನು ತುಂಬಿ ಅದರಲ್ಲಿ ಗಿಡ ಬೆಳೆಸಲಾಗುತ್ತಿದೆ. ತೆಂಗಿನ ಗರಿಗಳನ್ನು ಹಾಸಲಾಗಿದೆ. ಬಿಸಿಲಿನ ಪ್ರಮಾಣ ನಿಯಂತ್ರಿಸಲು ಇದು ಪೂರಕವಾಗಿದೆ.


ಮಾಂಸಾಹಾರಿ ಪ್ರಾಣಿಗಳಿಗೂ ಆಹಾರ ಪಥ್ಯ:


ಮಾಂಸಾಹಾರಿ ಪ್ರಾಣಿಗಳ ಆರೋಗ್ಯ ಕಾಪಾಡಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಬಿಸಿಲಿನ ಬೇಗೆಯಿಂದಾಗಿ ಈ ಹಿಂದೆ ನೀಡಲಾಗುತ್ತಿದ್ದ ಮಾಂಸದ ಪ್ರಮಾಣ ಕಡಿಮೆ ಮಾಡಲಾಗಿದ್ದು, ನೀರಿನ ಅಂಶ ದೇಹ ಸೇರುವಂತೆ ನಿಗಾ ವಹಿಸಲಾಗಿದೆ. ಹುಲಿ, ಸಿಂಹ, ಚಿರತೆ ಇರುವ ಸ್ಥಳದಲ್ಲೂ ಕೃತಕ ಜಲಪಾತ, ನೀರಿನ ಹಳ್ಳ ನಿರ್ಮಿಸಿರುವುದರಿಂದ ಅದರಲ್ಲೂ ಈ ಪ್ರಾಣಿಗಳು ವಿಶ್ರಾಂತಿಯೊಂದಿಗೆ ದೇಹ ತಂಪಾಗಿಸಿಕೊಳ್ಳುತ್ತಿವೆ.


ಝೂ ವಾತಾವರಣ ತಂಪು:

ಮಗಾಲಯದ ವಾತಾವರಣವೇ ತಂಪಾಗಿದೆ. ನಗರದ ವಾತಾವರಣ 38-40 ಡಿಗ್ರಿ ಇದ್ದರೆ, ಮೃಗಾಲಯದ ಆವರಣದಲ್ಲಿ ಉಷ್ಣಾಂಶ 35-36 ಡಿಗ್ರಿ ಇರುತ್ತದೆ. ಸಾಕಷ್ಟು ಮರಗಳಿರುವುದರಿಂದ ಹಾಗೂ ಸಣ್ಣಪುಟ್ಟ ಕೊಳ ಇರುವುದರಿಂದ ಮೃಗಾಲಯದ ವಾತಾವರಣ ಯಾವಾಗಲೂ ತಂಪಾಗಿರುತ್ತದೆ.

ಬೇಸಿಗೆ ಹಿನ್ನೆಲೆಯಲ್ಲಿ ಕಳೆದ 4 ತಿಂಗಳಿಂದ ಮೃಗಾಲಯದಲ್ಲಿ ಬೇಸಿಗೆ ನಿರ್ವಹಣೆಗೆ ಹಾಗೂ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೂ ಮೃಗಾಲಯದಲ್ಲಿ ಈ ಹಿಂದೆ ಕೈಗೊಂಡ ಕ್ರಮ ಉತ್ತಮ ಫಲಿತಾಂಶ ನೀಡಿದೆ. ಎಲ್ಲ ಪ್ರಾಣಿ-ಪಕ್ಷಿಗಳನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲಾಗಿದೆ.ಡಿ.ಮಹೇಶ್‌ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ,ಚಾಮರಾಜೇಂದ್ರ ಮೃಗಾಲಯ