ಜಿಲ್ಲೆ

ಅನಿಲ್ ಮುತ್ನಾಳೆ ಗಡಿಪಾರಿಗೆ ಪ್ರಸ್ತಾವನೆ

ಹಳಿಯಾಳ: ಬೆಳಗಾವಿ ಜಿಲ್ಲೆಯಿಂದ ಗಡಿಪಾರಾಗಿ ಬಂದು ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ನೆಲೆಯೂರಿ ಇಲ್ಲಿಯೂ ಕೋಮು ಸೌಹಾರ್ದ ಹದಗೆಡಿಸುತ್ತಿರುವ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯ ಅನಿಲ್ ಮುತ್ನಾಳೆ ಅವರನ್ನು ಉಕ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಸ್ಪಿ ಎಂ. ನಾರಾಯಣ ಅವರು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಅನಿಲ್ ಮುತ್ನಾಳೆಯನ್ನು 2002-03ನೇ ಸಾಲಿನಲ್ಲಿ ಹಳಿಯಾಳಕ್ಕೆ ಗಡಿಪಾರು ಮಾಡಲಾಗಿದೆ. ಉಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರು ಅನಿಲ್ಗೆ ನೋಟಿಸ್ ಜಾರಿ ಮಾಡಿ ಸೆ. 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
2008ರಲ್ಲಿ ಹಳಿಯಾಳ ಕ್ಷೇತ್ರದ ಶಾಸಕರಾಗಿದ್ದ ಸುನೀಲ ಹೆಗಡೆ ಅವರಿಗೆ ಜೀವ ಬೆದರಿಕೆ ಹಾಕಿದ್ದ ಮುತ್ನಾಳೆಯ ಪ್ರಕರಣ 2012ರಲ್ಲಿ ಖುಲಾಸೆಗೊಂಡಿದೆ.

ಮುತ್ನಾಳೆ ವಿರುದ್ಧ ಮಹಿಳೆ ಮೇಲೆ ಹಲ್ಲೆ, ಮಾನಹಾನಿ, ಲೈಂಗಿಕ ದೌರ್ಜನ್ಯ, ಕೊಲೆ ಹಾಗೂ ಉಪ ವಿಭಾಗಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 4 ಕ್ರಿಮಿನಲ್ ಪ್ರಕರಣಗಳು ಹಳಿಯಾಳ ಠಾಣೆಯಲ್ಲಿ ದಾಖಲಾಗಿದ್ದವು. ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದಾರೆ.

ಪ್ರತಿಬಂಧಕ ಕಾನೂನಿನಡಿ ಕೋಮು ಸೌಹಾರ್ದಕ್ಕೆ ಧಕ್ಕೆ, ಚುನಾವಣೆ ಸಂದರ್ಭದಲ್ಲಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಘಟನೆಗಳಲ್ಲಿ ಭಾಗಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಜಗಳ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಈತನನ್ನು ನಿಯಂತ್ರಿಸಲು ಸಿಆರ್‌ಪಿಸಿ ಕಲಂ 107 ಅಡಿ 11 ಪ್ರಕರಣಗಳು, ಕಲಂ 110 ಅಡಿ 1 ಹೀಗೆ ಒಟ್ಟೂ 12 ಪ್ರಕರಣಗಳು ಚಾಲ್ತಿಯಲ್ಲಿವೆ.

ಹತ್ತಾರು ಪ್ರಕರಣಗಳನ್ನು ಎದುರಿಸುತ್ತಿದ್ದರು ಕೂಡ ಹಿಂದಿನ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಕಾರಣ ಹಾಗೂ ಸಮಾಜಕ್ಕೆ ಮತ್ತು ಸ್ವತ್ತಿಗೆ ಅಪಾಯಕಾರಿ ವ್ಯಕ್ತಿಯಾಗಿರುತ್ತೀರಿ ಎಂಬ ಉದ್ದೇಶದಿಂದ ಮತ್ತು ಸಮಾಜದಲ್ಲಿ ಶಾಂತಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಒಂದು ವರ್ಷಗಳ ಕಾಲ ಗಡಿಪಾರು ಮಾಡಬೇಕು ಎಂದು ಎಸ್ಪಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಾನು ಶಾಸಕನಾಗಿದ್ದ ಸಂದರ್ಭದಲ್ಲೇ ನನಗೆ ಜೀವ ಬೇದರಿಕೆ ಹಾಕಿದ್ದ. ಈ ಹಿಂದೆ ಸಹ ಅವನ ವಿರುದ್ಧ ಗಡಿಪಾರು ನೋಟಿಸ್ ಜಾರಿಯಾಗಿತ್ತು. ಪಕ್ಷದ ಮುಖಂಡನಾಗಿ ನನ್ನಿಂದಾದ ಸಹಾಯ ಸಹಕಾರವನ್ನು ಮುತ್ನಾಳೆಗೆ ನೀಡಿದ್ದೇನೆ. ಆದರೆ, ಆತ ಈಗ ನಮ್ಮ ಸಂಪರ್ಕದಲ್ಲಿ ಇಲ್ಲ.ಸುನೀಲ್ ಹೆಗಡೆ, ಮಾಜಿ ಶಾಸಕ