ಜಿಲ್ಲೆ

ಏ. 19 ರಂದು ಸಮಾನತೆ ರಥಯಾತ್ರೆ: ಅನಿಲ ಮೆಣಸಿನಕಾಯಿ

Gadag - Shivanand Hiremath
ವಿಜಯವಾಣಿ ಸುದ್ದಿಜಾಲ ಗದಗ
ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಏ.19 ರಿಂದ 15 ದಿನಗಳ ಕಾಲ ಸಮಾನತೆ ರಥಯಾತ್ರೆ ನಡೆಸಲಾಗುವುದು. ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಮಧ್ಯಾಹ್ನ 3 ಕ್ಕೆ ಯಾತ್ರೆಗೆ ಚಾಲನೆ ನೀಡಲಾಗುವುದು. ಗ್ರಾಮಗಳಲ್ಲಿಯೂ ಈ ರಥಯಾತ್ರೆ ಜರುಗಲಿದೆ. ಪ್ರತಿಯೊಂದು ದಿನ ವಾಲ್ಮೀಕಿ ರಾಮಾಯಣ, ಭಜನೆ, ಅಂಬೇಡ್ಕರ್ ಸಿದ್ಧಾಂತಗಳ ಚರ್ಚೆ ಸೇರಿದಂತೆ ಹಲವು ವಿಷಯಗಳು ಚರ್ಚೆ ನಡೆಸಲಾಗುವುದು. ಪ್ರತಿ ದಿನ ಸಂಜೆ ಬುತ್ತಿ ಜಾತ್ರೆ ಮಾಡಲಾಗುವುದು ಎಂದು  ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾನತೆ ಮಂದಿರ ನಿರ್ಮಾಣಕ್ಕೆ ಕುರ್ತಕೋಟಿ ಗ್ರಾಮದಲ್ಲಿ ಜನರು ಎರಡು ಎಕೆರೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಈ ಸಂಕಲ್ಪ ನೆರವೇರಿಸಲು ಗದಗ ಬೆಂಗಳೂರು ಸೇರಿದಂತೆ ಹಲವಾರು ದಾನಿಗಳು ಮಂದಿರ ನಿರ್ಮಿಸಲು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಮಂದಿರ ನಿರ್ಮಾಣಕಾರ್ಯ ಪೂರ್ಣ ಗೊಳಿಸಲಾಗುವುದು ಎಂದುರು.
ಸಮಾನತೆ ರಥಯಾತ್ರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ದಾಸರು, ಶಿಶುನಾಳ ಶರೀಫರು ಸೇರಿದಂತೆ ಹಲವರ ಪ್ರತಿಮೆಗಳು ಮೆರವಣಿಗೆ ಮಾಡಲಾಗುವುದು. ಜಯಂತಿ ಮಾಡುವ ಮೂಲಕ ಕೇವಲ ಅವರ ಜಯಂತಿ ಮಹನೀಯರನ್ನು ಸ್ಮರಣೆ ಮಾಡಲಾಗುತ್ತದೇ ವಿನಹ, ಅವರ ಸ್ಮರಣೆ ನಿತ್ಯ ನಿರಂತರ ಆಗಬೇಕು. ಹಾಗಾಗಿ ಸಮಾನತೆ ಮಂದಿರ. ಈ ಮಂದಿರವು ಕೇವಲ ಪೂಜಾ ಸ್ಥಾನವಾಗಿ ಮಾಡುತ್ತಿಲ್ಲ. ಇಲ್ಲಿ ಜ್ಞಾನವನ್ನು ಪಸರಿಸುವ ಕಾರ್ಯಕ್ಕೆ ನಾಂದಿ ಹಾಡಲಾಗುತ್ತಿದೆ. ಹಾಗಾಗಿ ಮಂದಿರ ನಿರ್ಮಾಣ ಅನಿವಾರ್ಯ ಇದೆ ಎಂದರು.
ಸಮಾನತೆ ರಥಯಾತ್ರೆಯು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ರಾಜಕೀಯ ಹೊರತುಪಡಿಸಿ ಈ ರಥಯಾತ್ರೆ ನಡೆಸಲಾಗುವುದು. ರಥಯಾತ್ರೆ ಜತೆಗೆ ಬುತ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿಧ ಗ್ರಾಮದಿಂದ ಬುತ್ತಿಯನ್ನು ಸಮರ್ಪಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಈ ಯಾತ್ರೆಗೆ ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರಿಗೂ ಆಹ್ವಾನ ಇದೆ ಎಂದು ಅನಿಲ ಮೆಣಸಿನಕಾಯಿ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ ಮಾತನಾಡಿ, ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಜರುಗಿವೆ. ಕಳೆದ ವರ್ಷ ಅಂಬೇಡ್ಕರ್ ಜಯಂತಿ ದಿನದಂದೇ ಸಮಾನತೆ ಮಂದಿರ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಅಖಿಲ ಭಾರತ ಸಮಾನತೆ ಪ್ರತಿಷ್ಠಾನದ ವತಿಯಿಂದ ಸಮಾನತೆ ರಥಯಾತ್ರೆ 15 ದಿನಗಳ ಕಾಲ ಜಿಲ್ಲೆಯಾದ್ಯಂತ ನಡೆಸಲಿದ್ದೇವೆ. ಕನಕದಾಸ, ಶಿಶುನಾಳ ಷರೀಫ್ ಸೇರಿದಂತೆ ಹಲವು, ದಾರ್ಶನಿಕರ ಮಹನೀಯರ ಪ್ರತಿಮೆಗಳ ಮೆರವಣಿಗೆ ನಡೆಲಸಾಗುವುದು ಎಂದರು.
ಪರಮೇಶ ಲಮಾಣಿ, ಸಿದ್ದು ಪಲ್ಲೇದ, ಮಂಜುನಾಥ ಮ್ಯಾಗೇರಿ, ವಸಂತ ಪಡಗದ, ಶರಣಪ್ಪ ಚಿಂಚಲಿ ಇತರರು ಇದ್ದರು.
ಶರಣ ಸಂಗಮ ಚಿಂತನೆ:
ಪ್ರಸ್ತುತ ಜಾತಿಗೊಂದು ಮಠ ನಿರ್ಮಾಣ ಆಗಿದೆ. ಆದರೆ ಉದ್ದೇಶ ಒಂದೇ ಆಗಿದೆ. ಅನ್ನದಾಸ, ಶಿಕ್ಷಣ ದಾಸೋಹ ಮಠಗಳ ಪರಂಪರೆ ಆಗಿದೆ. ಹಾಗಾಗಿ ಧರ್ಮಾತೀತ ಕಾರ್ಯಕ್ರಮ ಆಗಿರುವುದರಿಂದ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ವಿಫಲಗೊಳಿಸಲು ಹಲವರು ಸಂಚು ರೂಪಿಸಿದ್ದರು. ಅಂತವರಿಗೂ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು