ಗದಗ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯದ ನಾಲ್ಕು ದಿಕ್ಕಿನಿಂದ ಆರಂಭವಾಗಿರುವ ‘ವಿಜಯ ಸಂಕಲ್ಪ ಯಾತ್ರೆಯು ಮಾ.16 ರಂದು ಗುರುವಾರ ಗದುಗಿಗೆ ಬರಲಿದೆ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಯುವ ಮುಖಂಡ ಅನೀಲ ಮೆಣಸಿನಕಾಯಿ ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಲ್ಹಾದ ಜೋಶಿ, ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ವಿಜಯ ಸಂಕಲ್ಪ ಯಾತ್ರೆ’ಯ ಮುಖ್ಯ ಸಂಚಾಲಕರೂ ಆಗಿರುವ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಪರಿಷತ್ ಸದಸ್ಯರಾದ ಅರುಣ ಶಹಾಪೂರ, ಎಸ್.ವಿ. ಸಂಕನೂರ ಸೇರಿ ಹಲವರು ಉಪಸ್ಥಿತರಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗದಗ ಶಹರ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ, ಪವನ ಮೇಟಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ ಸೇರಿ ಹಲವರು ಉಪಸ್ಥಿತರಿದ್ದರು.
ಮೆರವಣಿಗೆ, ಬೈಕ್ ರ್ಯಾಲಿ: ಅಂದು ಮಧ್ಯಾಹ್ನ 1 ಗಂಟೆಗೆ ಗದುಗಿಗೆ ಆಗಮಿಸುವ ವಿಜಯ ಸಂಕಲ್ಪ ಯಾತ್ರೆಯು, ಹುಬ್ಬಳ್ಳಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಮೆರವಣಿಗೆ, ಬೈಕ್ ರ್ಯಾಲಿ ಮೂಲಕ ಆರಂಭವಾಗಲಿದೆ. ಅಲ್ಲಿಂದ ಪ್ರಮುಖಬೀದಿಗಳಲ್ಲಿ ಸಂಚರಿಸಿ ಬೆಟಗೇರಿಯ ಟೆಂಗಿನಕಾಯಿ ಬಜಾರ್‍ಗೆ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಬಿಜೆಪಿ ಯುವ ಸಮಾವೇಶ: ಮಾ.16 ರಂದು ಮಧ್ಯಾಹ್ನ 3.30ಕ್ಕೆ ಬೆಟಗೇರಿಯ ಟೆಂಗಿನಕಾಯಿ ಬಜಾರದಲ್ಲಿ ಗದಗ ಜಿಲ್ಲಾ ಮಟ್ಟದ ಬಿಜೆಪಿ ಯುವ ಸಮಾವೇಶ ನಡೆಯಲಿದೆ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಯುವ ಮುಖಂಡ ಅನೀಲ ಮೆಣಸಿನಕಾಯಿ ಹೇಳಿದರು. ಈ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ವಿಜಯ ಸಂಕಲ್ಪ ಯಾತ್ರೆಯ ಮುಖ್ಯ ಸಂಚಾಲಕರೂ ಆಗಿರುವ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಅವರು ಸೇರಿ ಹಲವರು ಆಗಮಿಸುವರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದ ಹಲವು ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಅನೀಲ ಮೆಣಸಿನಕಾಯಿ ಹೇಳಿದರು.
===