ಜಿಲ್ಲೆ

ರೈತರ ಆದಾಯ ಹೆಚ್ಚಿಸಲು ಅನಿಕೇತನ ಕಂಪನಿ ಶ್ರಮ

ಯಳಂದೂರು: ರೈತರ ಆದಾಯವನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅನಿಕೇತನ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಎಂ.ಆರ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.


ಪಟ್ಟಣದ ಕಾರಾಪುರ ಮಠದಲ್ಲಿ ಗುರುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಿಂದ 650 ಸದಸ್ಯರು ಇದ್ದಾರೆ. ಕಂಪನಿ ಆರಂಭಗೊಂಡು 2 ವರ್ಷವಾಗಿದ್ದು, 7.15 ಲಕ್ಷ ರೂ. ಆದಾಯ ಬಂದಿದ್ದು, 6.10 ಲಕ್ಷ ರೂ. ಖರ್ಚಾಗಿದೆ. ಕಂಪನಿಯಿಂದ ನಿರ್ವಹಿಸುತ್ತಿರುವ ನಂದಿನಿ ಪಾರ್ಲರ್‌ನಿಂದ 66,485 ರೂ. ಆದಾಯ ಬಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಕಂಪನಿ ವತಿಯಿಂದ ಗೊಬ್ಬರದ ಮಾರಾಟ ಮಳಿಗೆ, ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ ಖರೀದಿ ಕೇಂದ್ರ ಸೇರಿದಂತೆ ಇತರ ಆದಾಯ ಬರುವ ಬಾಬ್ತುಗಳನ್ನು ಮಾಡಲು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


ಕಾರಾಪುರ ವಿರಕ್ತಮಠದ ಶ್ರೀ ಬಸವರಾಜ ಸ್ವಾಮಿಒಡೆಯರ್ ಮಾತನಾಡಿ, ಭಾರತ ರೈತರ ದೇಶವಾಗಿದೆ. ಕೃಷಿ ಇಲ್ಲಿನ ಬೆನ್ನೆಲಬು. ಆದರೆ ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬರ, ನೆರೆ ಹಾವಳಿಯಿಂದ ಈತ ಪ್ರತಿ ವರ್ಷವೂ ನಲುಗುತ್ತಾನೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಇಂತಹ ಸಂಘ-ಸಂಸ್ಥೆಗಳು, ಕಂಪನಿಗಳು ಸಂಜೀವಿನಿಯಾಗಿ ಕೆಲಸ ಮಾಡಬೇಕು. ಇವರ ಕಷ್ಟಕ್ಕೆ ಸ್ಪಂದಿಸಿ ಇವರ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಗೌಡಹಳ್ಳಿ ಮಠದ ಮರಿತೋಂಟದಾರ್ಯ ಸ್ವಾಮೀಜಿ, ಮೈಕಾಫ್ಸ್ ಕಾವೇರಿ ಪ್ರಾದೇಶಿಕ ಸಂಸ್ಥೆಯ ಸಂಯೋಜನಾಧಿಕಾರಿ ಶಶಿಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ನಟರಾಜು, ಉಪಾಧ್ಯಕ್ಷ ಆರ್.ನಾಗರಾಜು, ನಿರ್ದೇಶಕರಾದ ಡಿ.ಜೆ.ರಾಜೇಶ್, ಎಚ್.ವಿ.ಪ್ರಕಾಶ್, ಎ.ಎಂ.ಶಿವಕುಮಾರಸ್ವಾಮಿ, ಎಸ್.ಸಿದ್ದಲಿಂಗಸ್ವಾಮಿ, ರಾಮಶೆಟ್ಟಿ, ರಾಜು, ರಂಗಸ್ವಾಮಿನಾಯಕ, ಎಂ.ನಟರಾಜು, ಮುಕೇಶ್, ಬಾಬು, ರಾಮ್‌ಸಿಂಗ್ ಸೇರಿದಂತೆ ಅನೇಕರು ಇದ್ದರು.