ಜಿಲ್ಲೆ

ತ.ನಾಡಿಗೆ ಬೆಣ್ಣೆ, ಜಿಲ್ಲೆಯ ರೈತರಿಗೆ ಸುಣ್ಣ: ಕಾವೇರಿ ನೀರಾವರಿ ನಿಗಮದ ಇಬ್ಬಗೆ ನೀತಿ, ನೀರಿದ್ದರೂ ಕಟ್ಟುಪದ್ಧತಿ ನಿಯಮವೇಕೆ?

ಮಂಡ್ಯ: ಊರಿಗೆ ಉಪಕಾರಿ ಮನೆಗೆ ಮಾರಿ ಎನ್ನುವ ಗಾದೆ ಮಾತಿನಂತಾಗಿದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವರ್ತನೆ.
ವರುಣ ಕೃಪೆ ತೋರಿದ ಪರಿಣಾಮ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ಗರಿಷ್ಟ ಮಟ್ಟ ತಲುಪಿದೆ. ಅಲ್ಲದೆ ತಮಿಳುನಾಡಿಗೆ ಸಾಕಷ್ಟು ನೀರು ಹರಿದುಹೋಗಿದೆ. ಇದರಿಂದಾಗಿ ಸದ್ಯಕ್ಕೆ ಆ ರಾಜ್ಯದಿಂದ ಯಾವುದೇ ಸಮಸ್ಯೆಯಿಲ್ಲ. ಹೀಗಿರುವಾಗ ಜಿಲ್ಲೆಯ ರೈತರು ಬೆಳೆ ಬೆಳೆಯಲು ಅನುಕೂಲ ಆಗುವಂತೆ ನೀರು ಹರಿಸುವ ಬದಲು ಕಟ್ಟುಪದ್ಧತಿ ನಿಯಮ ಅನುಷ್ಠಾನಕ್ಕೆ ನಿಗಮ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಜು.6ರಂದು ನಡೆದ ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೆಆರ್‌ಎಸ್‌ನಲ್ಲಿ ಬಳಕೆಗೆ ಲಭ್ಯವಿರುವ ನೀರನ್ನು ಅವಲೋಕಿಸಿ, ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸಲು ಮಾತ್ರ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಜ.6ರಂದು ಜಲಾಶಯದಲ್ಲಿ ಕೇವಲ 100 ಅಡಿ ಮಾತ್ರವೇ ನೀರು ಇದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಜು.10ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಅಂದು 103.90 ಅಡಿ ಮಾತ್ರವೇ ನೀರಿತ್ತು. ಜಲಾಶಯದ ನೀರಿನ ಮಟ್ಟವು 110 ತಲುಪಿದ ಪರಿಣಾಮ ಮುಂಗಾರು ಬೆಳೆಗಳಿಗೆ ನೀರು ಸಿಗುವ ಭರವಸೆ ಜಿಲ್ಲೆಯ ರೈತರಲ್ಲಿ ಮೂಡಿತ್ತು. ಜು.11ರಿಂದಲೇ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಜಲಾಶಯಕ್ಕೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಕನ್ನಂಬಾಡಿ ಕಟ್ಟೆಯು ಸಂಪೂರ್ಣ ಭರ್ತಿಯಾಗಿದೆ.
124.80 ಗರಿಷ್ಟ ಅಡಿ ಸಂಗ್ರಹದ ಜಲಾಶಯವು ಜು.24ರಂದು ಸಂಪೂರ್ಣ ಭರ್ತಿಯಾಯಿತು. ಜು.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನವನ್ನೂ ಸಲ್ಲಿಸಿದ್ದಾರೆ. ಈ ಮಧ್ಯೆ ತಮಿಳುನಾಡಿಗೆ ಅಗತ್ಯಕ್ಕೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು, ಆಗಸ್ಟ್ ತಿಂಗಳಲ್ಲಿ ಕೊಡಬೇಕಾದ ನೀರನ್ನೂ ಕೂಡ ಜುಲೈ ತಿಂಗಳಲ್ಲೇ ಹರಿಸಲಾಗಿದೆ. 

ಬರ ಮರೆತು ಹೋಯ್ತ?
ಕಳೆದ ವರ್ಷ ಭೀಕರ ಬರಗಾಲ ಜಿಲ್ಲೆಯ ರೈತರ ಬದುಕನ್ನು ನಾಶಮಾಡಿತ್ತು. ಹಲವು ದಶಕದಿಂದ ಕಾಪಾಡಿಕೊಂಡು ಬಂದಿದ್ದ ಅಡಕೆ ಹಾಗೂ ತೆಂಗಿನಮರ ಒಣಗಿ ನೆಲಕಚ್ಚಿದವು. ಜತೆಗೆ ಕೃಷಿ ಭೂಮಿ ಕೂಡ ಬರಡಾಗಿತ್ತು. ಇನ್ನು ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆಗೊಮ್ಮೆ ಹೀಗೊಮ್ಮೆ ಸಾಧಾರಣ ಮಳೆಯಾಗಿದ್ದಷ್ಟೇ ಪುಣ್ಯ. ಆದ್ದರಿಂದ ಈ ವರ್ಷ ಕೃಷಿಯಾಗಬೇಕಾದರೆ ಕೆಆರ್‌ಎಸ್ ನೀರು ಅಗತ್ಯವಾಗಿದೆ. ಇದರೊಂದಿಗೆ ಅಂತರ್ಜಲದ ವೃದ್ಧಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ನಾಲೆಯಲ್ಲಿ ನಿರಂತರವಾಗಿ ನೀರು ಹರಿಯಬೇಕು. ಇಲ್ಲದಿದ್ದರೆ ಕೃಷಿಗೆ ಸಮಸ್ಯೆಯಾಗಲಿದೆ.
ತ.ನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚು ನೀರು ಹರಿದಿದೆ. ಆದರೆ ಜಿಲ್ಲೆಯ ರೈತರಿಗೆ ನೀರು ಕೊಡಲು ನಿಗಮದ ಅಧಿಕಾರಿಗಳಿಗೆ ಅದ್ಯಾಕೆ ಇಷ್ಟವಿಲ್ಲವೋ ಎನ್ನುವುದೇ ದೊಡ್ಡ ಪ್ರಶ್ನೆ. ಮಳೆಯಾಗದ ಪರಿಣಾಮ ಜಿಲ್ಲೆಯ ಕೆರೆಗಳು ಖಾಲಿಯಾಗಿವೆ. ಇತ್ತೀಚೆಗಷ್ಟೇ ಡ್ಯಾಂನಿಂದ ನೀರು ಹರಿಸುತ್ತಿದ್ದು, ಈಗಷ್ಟೇ ಅರ್ಧ ಭಾಗದಷ್ಟು ಕೆರೆ ಭರ್ತಿಯಾಗಿವೆ. ಈಗಿರುವಾಗ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ನೀರು ಕೊಡಲು ಕಟ್ಟು ಪದ್ಧತಿಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗೆ ನೋಡಿದರೆ ನೀರಿಗೆ ಸಮಸ್ಯೆ ಇದ್ದಾಗ ಮಾತ್ರ ಕಟ್ಟು ನೀರು ಪದ್ಧತಿಯಲ್ಲಿ ನೀರು ಕೊಡಲಾಗುತ್ತಿತ್ತು. ಪ್ರಸ್ತುತ ಜಲಾಶಯ ಸಂಪೂರ್ಣ ತುಂಬಿದೆ.