ಬಂಟ್ವಾಳ: ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕೇಂದ್ರದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. 6 ಬಾರಿ ಶಾಸಕರಾದರೂ ಅಂಗಾರರಿಗೆ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ, ಆದರೂ ಅವರು ಇನ್ನೊಬ್ಬ ಬಸನಗೌಡ ಪಾಟೀಲ್ ಆಗಿಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರಾವಳಿಯ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುತ್ತದೋ ಎನ್ನುವುದು ಪ್ರಶ್ನಾರ್ಥಕ. ಬಿಜೆಪಿಗೆ ಬಂದ ಕಾಂಗ್ರೆಸ್, ಜೆಡಿಎಸ್‌ನ ಶಾಸಕರನ್ನು ನಿಡಿದ ಭರವಸೆಯಂತೆ ಮಂತ್ರಿ ಮಾಡಬೇಕಾಗಿದೆ. ಉಳಿದ ಸೀಟುಗಳನ್ನು ನಮ್ಮ ಶಾಸಕರಿಗೆ ಹಂಚಬೇಕಿದೆ. ಮತದಾರ ಪೂರ್ಣ ಬಹುಮತ ನೀಡಿರುತ್ತಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದರು. ಸಾಕಷ್ಟು ಮಂದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ನಾಯಕರು, ಮುಖ್ಯಮಂತ್ರಿಯವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಷ್ಟು ಜನಕ್ಕೆ ಅವಕಾಶ ಸಿಗುತ್ತದೆ ಎನ್ನುವುದು ಜ.13ರಂದು ತೀರ್ಮಾನ ಆಗಲಿದೆ ಎಂದರು.