ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯ 61 ಅಂಗನವಾಡಿಗಳು ಸ್ಮಾರ್ಟ್ ಆಗಲಿವೆ.
ಆರು ಅಂಗನವಾಡಿಗಳು ಸ್ಮಾರ್ಟ್ ಆಗಿವೆ. ಹೊಸ ಅಂಗನವಾಡಿ ಕಟ್ಟಡಗಳು ಮತ್ತು ಸ್ಮಾರ್ಟ್ ಅಂಗನವಾಡಿಗಳ ನಿರ್ಮಾಣಕ್ಕಾಗಿ ಕೆಡಿಪಿಯಲ್ಲಿ 1303 ಲಕ್ಷ ರೂ. ಸೇರಿಸಲಾಗಿದೆ. ಅಂಗನವಾಡಿಗಳನ್ನು ಸ್ಮಾರ್ಟ್ ಮಾಡಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ 826.34 ಲಕ್ಷ ರೂ. ಮತ್ತು ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ 476.66 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.
ಮಧೂರು ಗ್ರಾಪಂನ ಚೇನಕ್ಕೋಡು, ಪಾರ್ತತೊಟ್ಟಿ, ಕುದ್ರೆಪ್ಪಾಡಿ, ಮಂಗಲ್ಪಾಡಿ ಗ್ರಾಪಂನ ಮಣ್ಣಂಗುಳಿ, ನೀಲೇಶ್ವರ ನಗರಸಭೆಯ ಕೊಟ್ಟಪ್ಪುರ ಮತ್ತು ಮಡಿಕೈ ಗ್ರಾಪಂನ ಅಲೈನಲ್ಲಿ ಸ್ಮಾರ್ಟ್ ಅಂಗನವಾಡಿಗಳ ಕೆಲಸ ಪೂರ್ಣಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ನೆರವಿನ ಜತೆಗೆ, ಅಂಗನವಾಡಿಗಳಲ್ಲಿ ಪ್ರಸ್ತುತ 1876.44 ಲಕ್ಷ ರೂ. ಮೌಲ್ಯದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಂದ 573.19 ಲಕ್ಷ ರೂ.ಗಳನ್ನು ಬಳಸಲಾಗುತ್ತಿದೆ. ಅಂಗನವಾಡಿಗಳ ನವೀಕರಣಕ್ಕಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯದಿಂದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನೇತೃತ್ವದಲ್ಲಿ ಮಿಷನ್ ಅಂಗನವಾಡಿಗಳು ಎಂಬ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿದೆ.
ಜಿಲ್ಲೆಯಲ್ಲಿ 38 ಗ್ರಾಪಂಗಳು ಮತ್ತು ಮೂರು ನಗರಸಭೆಗಳ ವಿವಿಧ ವಾರ್ಡ್‌ಗಳಲ್ಲಿ ಒಟ್ಟು 1348 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 1,203 ಅಂಗನವಾಡಿಗಳು ಮಾತ್ರ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಕಟ್ಟಡಗಳಾಗಿವೆ. ಉಳಿದ 145 ಅಂಗನವಾಡಿಗಳು ಬಾಡಿಗೆ ಕಟ್ಟಡಗಳು ಅಥವಾ ಅಂಗನವಾಡಿಗಳಿಗೆ ಸೂಕ್ತವಲ್ಲದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ತಿಳಿವಳಿಕೆ ಆಧಾರದಲ್ಲಿ 2022-23ರ ಆರ್ಥಿಕ ವರ್ಷದಿಂದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನೇತೃತ್ವದಲ್ಲಿ ಮಿಷನ್ ಅಂಗನವಾಡಿ ಎಂಬ ಯೋಜನೆ ರೂಪಿಸಿ, ಫೆಬ್ರವರಿ ತಿಂಗಳಲ್ಲಿ ಜಾರಿಗೊಳಿಸಲಾಯಿತು. ಯೋಜನೆಯಡಿಯಲ್ಲಿ ಸ್ವಂತ ಕಟ್ಟಡವಿಲ್ಲದ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಆಧುನಿಕ ಸೌಲಭ್ಯ ಹೊಂದಿರುವ ಕಟ್ಟಡಗಳನ್ನು ಒದಗಿಸಲಾಗುತ್ತಿದೆ.