ಮಂಡ್ಯ: ದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನಿಗದಿ ಮಾಡಿ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬಾಲಭವನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಹೊಸ ಗುಣಮಟ್ಟದ ಮೊಬೈಲ್‌ಗಳ ವಿತರಿಸಬೇಕು. ಬಜೆಟ್‌ನಲ್ಲಿ ಹೆಚ್ಚಳವಾದ ಒಂದು ಸಾವಿರ ರೂ ಗೌರವಧನ ಬಿಡುಗಡೆ ಮಾಡಬೇಕು. ಇಎಸ್‌ಐ, ಪಿಎಫ್, ಪಿಂಚಣಿ, ಎಕ್ಸ್‌ಗ್ರೇಷಿಯಾ ಸೌಲಭ್ಯ ನೀಡಬೇಕು. 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್‌ಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಸುಪ್ರೀಂಕೋರ್ಟ್ ನೀಡಿರುವ ಗ್ಯಾಚ್ಯುಟಿ ಕೊಡುವ ತೀರ್ಪನ್ನು ಕೂಡಲೇ ಜಾರಿಯಾಗಬೇಕು. ಭತ್ಯೆಗಳ ಪರಿಶೀಲನೆ ಮತ್ತು ನಿಗದಿಗಾಗಿ ಸಮಿತಿ ರಚಿಸಬೇಕು. ಏಕರೂಪದ ಸೇವಾ ನಿಯಮಗಳ ಕೂಡಲೇ ರೂಪಿಸಬೇಕು. ದೆಹಲಿಯಲ್ಲಿ ಸಂಘಟನೆ, ಮುಷ್ಕರ ಮಾಡಿದ ಕಾರಣಕ್ಕಾಗಿ ಕೆಲಸದಿಂದ ತೆಗೆದಿರುವ ಎಲ್ಲರನ್ನು ಮರು ನೇಮಕಾತಿ ಮಾಡಿಕೊಂಡು ಸಂಘಟನೆ, ಪ್ರತಿಭಟಿಸುವ ಹಕ್ಕು ಖಾತರಿಪಡಿಸಬೇಕು. ಹಂತಹಂತವಾಗಿ ಟ್ಯಾಬ್ಲೆಟ್‌ಗಳನ್ನು ನೀಡಬೇಕು. ಮೊಬೈಲ್‌ಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು. ಐಸಿಡಿಎಸ್‌ಯೇತರ ಮತ್ತು ಇತರೆ ಇಲಾಖೆಗಳ ಕೆಲಸವನ್ನು ನೀಡಬಾರದು. ಇಸಿಸಿಇ ಮತ್ತು ಐಸಿಡಿಎಸ್ ಗುಣಾತ್ಮಕ ಅನುಷ್ಠಾನಕ್ಕಾಗಿ ಹಾಗೂ ಸಂಬಳ ಮತ್ತು ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಬೇಕು. ಎನ್‌ಇಪಿ 2020 ಅನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯ ತಾಲೂಕು ಅಧ್ಯಕ್ಷೆ ಪ್ರಮೀಳಾಕುಮಾರಿ, ಮಂಗಳಾ, ಗಾಯತ್ರಿ ಇತರರಿದ್ದರು.