ವಿಜಯಪುರ: ಕನಿಷ್ಠ ವೇತನ ಹಾಗೂ ಹುದ್ದೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು. 9 ರಂದು ರಾಜ್ಯಾದ್ಯಂತ ಅಂಗನವಾಡಿ ನೌಕರರ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯಡಿ 50 ವರ್ಷಗಳಿಂದ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯಯಡಿ ಈ ಯೋಜನೆಯನ್ನು ಕಾಯಂ ಮಾಡಬೇಕು. ಗುಜರಾತ್ ಹೈಕೋರ್ಟ್ ಸಹ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು ಎಂದು ತೀರ್ಪು ನೀಡಿದೆ. ಕಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು ಎಂಬ ಬೇಡಿಕೆ ಮಂಡಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಂಗನವಾಡಿ ನೌಕರರಿಗೆ ಕನಿಷ್ಠ 26 ಸಾವಿರ ರೂ. ವೇತನ ಹಾಗೂ 10 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಐಸಿಡಿಎಸ್ ಯೋಜನೆಯ ಬಜೆಟ್ ಹೆಚ್ಚಿಸಬೇಕು ಎಂಬ ನಿರಂತರ ಬೇಡಿಕೆ ಇದೆ. ಆದರೆ, ಕಾರ್ಪೊರೇಟ್ ಬಂಡವಾಳದಾರರಿಗೆ 15.32 ಲಕ್ಷ ಕೋಟಿ ರೂ. ಸಾಲ ಮನ್ನಾ ಮತ್ತು 1.97 ಲಕ್ಷ ಕೋಟಿ ರೂ. ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರಕ್ಕೆ ದೇಶದ ಭವಿಷ್ಯತ್ತನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗೆಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ಕೆಲಸ ಮಾಡುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲವಾಗಿದೆ ಎಂದು ಕಿಡಿಕಾರಿದರು.
ದೇಶದ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಸಂಘ ಕಟ್ಟುವ ಹಕ್ಕು ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿರ್ಬಂಧಗಳ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ. ಆದ್ದರಿಂದ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದು ಮಾಡಬೇಕು ಎಂದು ವರಲಕ್ಷ್ಮಿಒತ್ತಾಯಿಸಿದರು.
ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರಾೃಕ್ಟರ್‌ನ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ತೊಂದರೆ ಕೊಡಬಾರದು. ರಾಜ್ಯ ಸರ್ಕಾರ 2023 ಏಪ್ರಿಲ್ 1ರಿಂದ 1972 ಗ್ರಾಜ್ಯುಟಿ ಪಾವತಿ ಕಾಯ್ದೆ ಅನ್ವಯ ಈಗಾಗಲೇ 287 ಕಾರ್ಯಕರ್ತೆಯರು ಮತ್ತು 1,204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದೆ. ಅದೇ ರೀತಿಯಾಗಿ 2011ರಿಂದ ನಿವೃತ್ತಿಯಾದ 10,311 ಕಾರ್ಯಕರ್ತೆಯರು ಹಾಗೂ 11,980 ಸಹಾಯಕಿಯರಿಗೂ ಇದನ್ನು ಅನ್ವಯಿಸಬೇಕೆಂದು ಮುಷ್ಕರದ ಮೂಲಕ ಒತ್ತಾಯಿಸಲಾಗುತ್ತಿದೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಎಚ್.ಎಸ್, ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಪದಾಧಿಕಾರಿಗಳಾದ ಅಶ್ವಿನಿ ತಳವಾರ, ಪ್ರತಿಭಾ ಕುರುಡೆ, ರೇಣುಕಾ ಪೂಜಾರಿ ಮತ್ತಿತರರಿದ್ದರು.