ರತ್ನಾಕರ ಸುಬ್ರಹ್ಮಣ್ಯ
ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಅಂಗನವಾಡಿ ಕೇಂದ್ರ ಇನ್ನೂ ಶಾಲಾ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಅಂಗನವಾಡಿಗೆಂದು ಹೊಸ ಕಟ್ಟಡದ ಟೆಂಡರ್ ಪೂರ್ಣಗೊಂಡು ಶಿಲಾನ್ಯಾಸ ನೆರವೇರಿದರೂ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ.
ಒಂದೂವರೆ ವರ್ಷದಿಂದ ಬೆಂಡೋಡಿ ಶಾಲಾ ಕೊಠಡಿಯಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದ್ದು, ಈ ಅಂಗನವಾಡಿ ವ್ಯಾಪ್ತಿಯಲ್ಲಿ ಸುಮಾರು 100 ಅಧಿಕ ಮನೆಗಳಿವೆ. ಪ್ರಸ್ತುತ 10ಕ್ಕೂ ಅಧಿಕ ಮಕ್ಕಳು ಬೆಂಡೋಡಿ ಅಂಗನವಾಡಿಗೆ ಬರುತ್ತಿದ್ದಾರೆ.
ಹೊಸ ಕಟ್ಟಡಕ್ಕೆ ಅನುದಾನ: ಬೆಂಡೋಡಿಗೆ ಹೊಸ ಅಂಗನವಾಡಿ ಕೇಂದ್ರ ಬೇಕು ಎಂಬ ಗ್ರಾಮಸ್ಥರ ಬೇಡಿಕೆಯಂತೆ ಹೊಸ ಅಂಗನವಾಡಿ ಕೇಂದ್ರ ಮಂಜೂರುಗೊಂಡಿತ್ತು. ಶಾಲಾ ಬಳಿಯಲ್ಲೇ 10 ಸೆಂಟ್ಸ್ ಭೂಮಿಯನ್ನು ಅಂಗನವಾಡಿಗೆಂದು ಕಾದಿರಿಸಲಾಗಿತ್ತು. ಅಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲು ನರೇಗಾ ಯೋಜನೆ ಮೂಲಕ 8 ಲಕ್ಷ ರೂ., ಕೊಲ್ಲಮೊಗ್ರು ಗ್ರಾಪಂನಿಂದ 2 ಲಕ್ಷ ರೂ. ಹಾಗೂ ಇಲಾಖೆಯಿಂದ 10 ಲಕ್ಷ ರೂ. ಸಹಿತ ಒಟ್ಟು 20 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿತ್ತು. ಜತೆಗೆ, ಕೆಲವು ತಿಂಗಳ ಹಿಂದೆಯೇ ಹೊಸ ಅಂಗನವಾಡಿ ಕೇಂದ್ರಕ್ಕೆ ಶಿಲಾನ್ಯಾಸವೂ ನೆರವೇರಿತ್ತು.
ಶುರುವಾಗದ ಕಾಮಗಾರಿ: ಶಿಲಾನ್ಯಾಸ ನೆರವೇರಿ ತಿಂಗಳುಗಳೇ ಉರುಳಿದರೂ ಅಂಗನವಾಡಿ ಕಟ್ಟಡದ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. ಈ ಕುರಿತು ಸಂಬಂದಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ತಿಳಿಸಿದ್ದು, ಅಧಿಕಾರಿ, ಇಲಾಖೆಯ ಕಾರ್ಯವೈಖರಿಯಿಂದ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಕೂಡಲೇ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಆರಂಭಿಸಲು ಆಡಳಿತ ವರ್ಗ ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ಮಾರ್ಗ ಅನಿವಾರ್ಯ ಎಂದು ಗ್ರಾಮಸ್ಥರು, ಪಾಲಕರು ಒತ್ತಾಯಿಸಿದ್ದಾರೆ.
ಬೆಂಡೋಡಿ ಅಂಗನವಾಡಿಯ ಹೊಸಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಆದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಕೇಂದ್ರದ ಹೊಸ ಬಿಲ್ಡಿಂಗ್ ಆರಂಭಿಸಲು ಸಂಬಂಧಿಸಿದವರು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಗ್ರಾಮ ಪಂಚಾಯಿತಿ ವತಿಯಿಂದಲೂ ತಿಳಿಸಲಾಗಿದೆ.