ಜಿಲ್ಲೆ

ಬಾಂಜಾರುಮಲೆಯಲ್ಲಿ ತೆರೆಯಿತು ಅಂಗನವಾಡಿ : ದುರ್ಗಮ ಪ್ರದೇಶದಲ್ಲಿ ಹಲವಾರು ವರ್ಷದ ಬೇಡಿಕೆ ಕೊನೆಗೂ ಈಡೇರಿಕೆ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ

ತಾಲೂಕಿನ ಅತ್ಯಂತ ಹಿಂದುಳಿದ, ತೀರಾ ದುರ್ಗಮ ಪ್ರದೇಶವಾದ ನೆರಿಯ ಗ್ರಾಮದ ಬಾಂಜಾರುಮಲೆಯಲ್ಲಿ ಅಂಗನವಾಡಿ ಕೇಂದ್ರ ಸ್ಥಾಪನೆಯ ಬಹುಕಾಲದ ಬೇಡಿಕೆ ಈಡೇರಿದೆ.

ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಬಾಂಜಾರುಮಲೆ ಪ್ರದೇಶದಲ್ಲಿ 40ರಷ್ಟು ಮನೆ, 160 ಆಸುಪಾಸು ಜನಸಂಖ್ಯೆ ಇದೆ. ಇಲ್ಲಿ ರಸ್ತೆ ಸಹಿತ ಯಾವುದೇ ಮೂಲಸೌಕರ್ಯಗಳಿಲ್ಲ. ವಿದ್ಯುತ್ ವ್ಯವಸ್ಥೆ ಇದ್ದರೂ ಅದು ವರ್ಷದಲ್ಲಿ ಆರು ತಿಂಗಳಿಗೆ ಮಾತ್ರ ಸೀಮಿತ. ಮೊಬೈಲ್ ನೆಟ್ವರ್ಕ್, ದೂರವಾಣಿ ವ್ಯವಸ್ಥೆ ಕೂಡ ಮರೀಚಿಕೆ. ಇಲ್ಲಿನ ಜನರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾದರೆ ಸುಮಾರು 30 ಕಿ.ಮೀ. ದುರ್ಗಮ ಅರಣ್ಯ ಪ್ರದೇಶದಲ್ಲಿ ಕ್ರಮಿಸಬೇಕು ಮತ್ತು ಇದಕ್ಕೆ ಸ್ವಂತ ವಾಹನ ಅಗತ್ಯ. ಇದಲ್ಲದೆ ಇಲ್ಲಿ ಕಾಡಾನೆ ಸಹಿತ ವನ್ಯಮೃಗಗಳ ಓಡಾಟವು ಸಾಕಷ್ಟಿದೆ. ಮಳೆಗಾಲದಲ್ಲಿ ಸೇತುವೆ ಇಲ್ಲದ ಎರಡು ನದಿಗಳನ್ನು ದಾಟಿ ಬರಬೇಕಾಗಿರುವುದು ಸಾಹಸದ ಕೆಲಸ.

ಬಾಡಿಗೆ ವಾಹನಗಳನ್ನೇ ಆಶ್ರಯಿಸಿರುವ ಇಲ್ಲಿನ ಜನತೆ ಯಾವುದೇ ಒಂದು ದಿನಸಿ ವಸ್ತು ಖರೀದಿಗೂ 30 ಕಿ.ಮೀ. ದೂರದ ಚಾರ್ಮಾಡಿ ಅಥವಾ ಕಕ್ಕಿಂಜೆಗೆ ಬರಬೇಕು. ಸಾಕಷ್ಟು ನೀರಿನಾಶ್ರಯ ಇರುವ ಇಲ್ಲಿನ ಹಿಂದುಳಿದ ಕೃಷಿ ಕುಟುಂಬಗಳಿಗೆ ಆಧುನಿಕ ಜಗತ್ತಿನ ಸೌಕರ್ಯಗಳು ಇನ್ನೂ ಸಿಗದಿರುವುದು ವಿಪರ್ಯಾಸ.

ಅಂಗನವಾಡಿ ಆರಂಭ: ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದ್ದ ಅಂಗನವಾಡಿ ಕೇಂದ್ರ ಇದೀಗ ಆರಂಭವಾಗಿದೆ. ಇಲ್ಲಿರುವ ಸಮುದಾಯ ಭವನದಲ್ಲಿ ಕಾರ್ಯಾರಂಭ ಮಾಡಿರುವ ಅಂಗನವಾಡಿಯಲ್ಲಿ ಪ್ರಸ್ತುತ 7 ಮಕ್ಕಳಿದ್ದಾರೆ. ಈ ವ್ಯಾಪ್ತಿಯಲ್ಲಿ ಇಬ್ಬರು ಗರ್ಭಿಣಿಯರು ಇದ್ದಾರೆ. ಸ್ಥಳೀಯರೊಬ್ಬರು ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದಾರೆ.

ಅಂಗನವಾಡಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್, ಅಭಿವೃದ್ಧಿ ಅಧಿಕಾರಿ ರಶ್ಮಿ, ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ಸಿಡಿಪಿಒ ಪ್ರಿಯಾ ಆಗ್ನೆಸ್, ಮೇಲ್ವಿಚಾರಕಿ ನಾಗವೇಣಿ ಭಾಗವಹಿಸಿ ಪಾಲಕರ ಸಭೆ ನಡೆಸಿ ಇಲಾಖೆಯ ಮಾಹಿತಿ ನೀಡಿದ್ದಾರೆ.

ಇಲ್ಲಿನ ಜನರು ಅಂಗನವಾಡಿಯಿಂದ ಫಲಾನುಭವಿಗಳಿಗೆ ಸಿಗುವ ಅಗತ್ಯ ಆಹಾರ ಸಾಮಗ್ರಿಗಾಗಿ 40 ಕಿ.ಮೀ. ದೂರದ ಗಂಡಿಬಾಗಿಲು ಅಂಗನವಾಡಿ ಕೇಂದ್ರವನ್ನು ಇದುವರೆಗೆ ಆಶ್ರಯಿಸಿದ್ದರು. ಇದಕ್ಕಾಗಿ ಹೆಚ್ಚಿನ ಖರ್ಚು, ಸಮಯ ವ್ಯಯವೂ ಆಗುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಇದೇ ಅಂಗನವಾಡಿ ಕೇಂದ್ರದ ಮೂಲಕ ಇಲ್ಲಿನ ಜನತೆಗೆ ಅಗತ್ಯ ಆಹಾರ, ಸಾಮಗ್ರಿಗಳ ವಿತರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇ.100 ಮತದಾನ

ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ.100 ಮತದಾನವಾಗಿದ್ದು ದೇಶವೇ ಗುರುತಿಸುವ ಕಾರ್ಯ ನಡೆದಿತ್ತು. ಹೊರಜಿಲ್ಲೆಗಳಲ್ಲಿರುವ ಇಲ್ಲಿನ ಮಂದಿ ಕೂಡ ತಮ್ಮ ಮತವನ್ನು ಚಲಾಯಿಸಿದ್ದರು. ಇಲ್ಲಿನ ಮೂಲಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮತದಾನದಲ್ಲಿ ಭಾಗವಹಿಸಿದ್ದ ಮಂದಿಗೆ ಇದೀಗ ಅಂಗನವಾಡಿ ಕೇಂದ್ರ ಆರಂಭವಾಗಿರುವುದು ಸಂತಸ ತಂದಿದೆ. ಆದರೆ ಇಲ್ಲಿಗೆ ಬೇಕಾಗಿರುವ ಇನ್ನಷ್ಟು ಅಗತ್ಯ ಸೌಕರ್ಯಗಳು ಯಾವಾಗ ದೊರೆಯಬಹುದು ಎಂಬ ನಿರೀಕ್ಷೆ ಮುಂದುವರಿದಿದೆ.

ಅಂಗನವಾಡಿ ಕೇಂದ್ರಕ್ಕೆ ನಿವೇಶನ ಸಿಗುವ ತನಕ ಇಲ್ಲಿನ ಸಮುದಾಯ ಭವನದಲ್ಲಿ ಕೇಂದ್ರ ಕಾರ್ಯ ನಿರ್ವಹಿಸಲಿದೆ. ನಿವೇಶನಕ್ಕಾಗಿ ಪ್ರಯತ್ನ ನಡೆದಿದ್ದು, ನಿವೇಶನ ದೊರಕಿದ ಕೂಡಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಿಯಾ ಆಗ್ನೆಸ್ ಸಿಡಿಪಿಒ, ಬೆಳ್ತಂಗಡಿ ಬಾಂಜಾರುಮಲೆಗೆ ಅಂಗನವಾಡಿ ಕೇಂದ್ರ ಬೇಕೆಂದು ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದೆವು. ಇದೀಗ ಪ್ರಾರಂಭವಾಗಿರುವುದು ಸಂತಸ ತಂದಿದೆ. ನಮ್ಮ ಪ್ರದೇಶಕ್ಕೆ ಇನ್ನಷ್ಟು ಮೂಲಸೌಕರ್ಯಗಳ ಅಗತ್ಯವಿದೆ. ಸುನೀಲ್ ಸ್ಥಳೀಯ, ಬಾಂಜಾರುಮಲೆ https://www.vijayavani.net/funding-for-sri-gopalakrishna-temple https://www.vijayavani.net/an-attempt-to-alleviate-hunger-during-the-month-of-ramadan