ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯ ಹಲವು ಅಂಗನವಾಡಿಗಳಿಗೆ ಸ್ಮಾರ್ಟ್‌ಟಚ್ ನೀಡಿರುವ ಹೊರತಾಗಿಯೂ ಇನ್ನು ನೂರಾರು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಮತ್ತೆ ಕೆಲವು ಕಡೆ ಅಂಗನವಾಡಿಗಳಿಗೆ ನಿವೇಶನ ಇಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ರಾಮನಗರ ಜಿಲ್ಲೆಯಾಗಿ 16 ವಸಂತಗಳನ್ನು ಕಳೆದಿದೆ. ಆದರೆ ಅಂಗನವಾಡಿಗಳಿಗೆ ಇನ್ನೂ ನಿವೇಶನ ಒದಗಿಸುವಲ್ಲಿ ಜಿಲ್ಲಾಡಳಿತ ವಿಲವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಮಾಡಿದ ಹೊರತಾಗಿಯೂ ನಿವೇಶನ ಲಭ್ಯತೆ ಇಲ್ಲದ ಕಾರಣ ಬಾಡಿಗೆ ಕಟ್ಟಡ ಇಲ್ಲವೇ, ಶಾಲಾ ಕೊಠಡಿಗಳಲ್ಲಿಯೇ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಮಿನಿ ಅಂಗವಾಡಿ ಸೇರಿ ಒಟ್ಟು 1586 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 1034 ಅಂಗನವಾಡಿಗಳು ಕೇಂದ್ರಗಳು ಮಾತ್ರ ಸ್ವಂತ ಕಟ್ಟಡವನ್ನು ಹೊಂದಿದ್ದು, ಉಳಿದವು ಬಾಡಿಗೆ ಕಟ್ಟಡ ಇಲ್ಲವೇ ಇತರ ಲಭ್ಯ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಸ್ಥಿತಿಯಂತೂ ಹೇಳಲಾಗದು.
ಇರುವ ಚಿಕ್ಕ ಜಾಗದಲ್ಲಿಯೇ ಮಕ್ಕಳಿಗೆ ಪಾಠ ಹೇಳಿಕೊಡುವ ಜತೆಗೆ ಸರ್ಕಾರ ಜಾರಿಗೆ ತರುವ ಹಲವಾರು ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು. ಕಿಷ್ಕಿಂದೆಯಂತಹ ಜಾಗದಲ್ಲೇ ಮಕ್ಕಳ ಕಲಿಕೆ, ನಿದ್ರೆ, ಆಟ, ಪೌಷ್ಟಿಕ ಆಹಾರವನ್ನು ತಯಾರಿಸಿ ನೀಡಬೇಕಿದೆ.
ನಿವೇಶನ ಲಭ್ಯವಿಲ್ಲದ ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಾಡಿಗಳಲ್ಲಿ ಸಿಂಹಪಾಲನ್ನು ನಗರ ಪ್ರದೇಶ ಹೊಂದಿದೆ. ನಿವೇಶನರಹಿತ ಅಂಗನವಾಡಿಗಳಲ್ಲಿ ಶೇ. 80ರಷ್ಟು ಅಂಗನವಾಡಿಗಳಿಗೆ ನಗರ ಪ್ರದೇಶದಲ್ಲಿ ನಿವೇಶನ ಇಲ್ಲ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಸಣ್ಣ ಬಾಡಿಗೆ ಕೊಠಡಿಗಳಲ್ಲೇ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ನಗರ ಪ್ರದೇಶದಲ್ಲಿ ಇರುವ ಬಡಾವಣೆಗಳ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿದರೂ ಅಲ್ಲಿಗೆ ಜನತೆ ತಮ್ಮ ಪುಟಾಣಿ ಮಕ್ಕಳನ್ನು ಕಳಿಸಲು ಮುಂದಾಗುವುದಿಲ್ಲ.
ಜಿಲ್ಲೆಯಲ್ಲಿ 1301 ಅಂಗನವಾಡಿಗಳು ಹಾಗೂ 285 ಮಿನಿ ಅಂಗನವಾಡಿಗಳೂ ಸೇರಿ ಒಟ್ಟು 1586 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 3ರಿಂದ 6 ವರ್ಷದೊಳಗಿನ 30 ಸಾವಿರದಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ 1034 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ಉಳಿದ 552 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 40ಕ್ಕೂ ಹೆಚ್ಚು ಅಂಗನವಾಡಿಗಳು ಸಮುದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, 189 ಅಂಗನವಾಡಿಗಳು ಶಾಲಾ ಕಟ್ಟಡಗಳಲ್ಲಿ ಇವೆ. 303 ಅಂಗನವಾಡಿಗಳು ಬಾಡಿಗೆ ಮನೆಯಲ್ಲೋ, ಕೊಠಡಿಯಲ್ಲೋ ಕಾರ್ಯನಿರ್ವಹಿಸುತ್ತಿವೆ. ವಿರ್ಪಯಾಸವೆಂದರೆ ಸುಮಾರು 259 ಅಂಗನವಾಡಿಗಳಿಗೆ ನಿವೇಶನವೇ ಇಲ್ಲ ಎನ್ನುವುದು.
ನಿವೇಶನ ಕೊರತೆ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿರುವ ಬೇಸರದ ಸಂಗತಿ ನಡುವೆಯೇ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ಅಂಗವಾಡಿಗಳಿಗೆ ಸ್ಮಾರ್ಟ್‌ಟಚ್ ನೀಡಲಾಗಿದೆ. ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಸ್ಮಾರ್ಟ್‌ಕ್ಲಾಸ್‌ಗಳನ್ನು ಆರಂಭಿಸಲಾಗಿದೆ. ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಂಡಿರುವ ಬಿಡದಿಯ 30ಕ್ಕೂ ಹೆಚ್ಚು ಅಂಗವಾಡಿಗಳು ಸಂಪೂರ್ಣ ಹೈಟೆಕ್ ರೂಪ ಪಡೆದುಕೊಂಡಿವೆ.
ಸ್ಥಳೀಯ ನೆರವು ಅಗತ್ಯ
ಅಂಗನವಾಡಿಗಳಿಗೆ ಬೇಕಾದ ನಿವೇಶನ, ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಜತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೂ ಹೌದು. ನಗರ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆಗಳ ಜನಪ್ರತಿನಿಧಿಗಳು ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಕೆ ಮಾಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಗಳು ಅಗತ್ಯ ನಿವೇಶನ ನೀಡುವ ಜತೆಗೆ ಪ್ರತಿ ಅಂಗನವಾಡಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ.
ಅಂಗನವಾಡಿಗಳು ಮಕ್ಕಳ ಕಲಿಕೆಯ ಮೊದಲ ಕೇಂದ್ರ. ಈ ಹಿನ್ನೆಲೆಯಲ್ಲಿ ಅವುಗಳಿಗೆ ಸ್ವಂತ ಕಟ್ಟಡ ಹೊಂದುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾಗ ಕೊಡಿಸುವ ಕೆಲಸ ಮಾಡಬೇಕು.
ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ, ರಾಮನಗರ
ಜಿಲ್ಲೆಯಲ್ಲಿ 1586 ಅಂಗನವಾಡಿಗಳು ಇದ್ದು, ಇದರಲ್ಲಿ 1034 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಅಂಗನವಾಡಿಗಳು ಸರ್ಕಾರಿ ಶಾಲೆ, ಸಮುದಾಯ ಭವನ ಸೇರಿ ಪರ್ಯಾಯ ಸ್ಥಳದಲ್ಲಿದ್ದು, 259 ಅಂಗನವಾಡಿಗಳಿಗೆ ಸ್ವಂತ ನಿವೇಶನವೇ ಇಲ್ಲ.
ಪ್ರಸನ್ನ ಕುಮಾರ್, ಡಿಡಿ (ಪ್ರಭಾರ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ
ನಿವೇಶನ ಇಲ್ಲದ ಅಂಗನವಾಡಿಗಳು
ತಾಲೂಕು ನಿವೇಶನ ರಹಿತ
ರಾಮನಗರ 79
ಚನ್ನಪಟ್ಟಣ 51
ಕನಕಪುರ 72
ಹಾರೋಹಳ್ಳೀ 19
ಮಾಗಡಿ 38
ಒಟ್ಟು 259