ಜಿಲ್ಲೆ

139 ಅಂಗನವಾಡಿಗಳ ಬಾಡಿಗೆ ಶೀಘ್ರ ಚುಕ್ತಾ

ಶಿವರಾಜ.ಎಂ

5 ತಿಂಗಳಿಂದ ಬಾಕಿ ಉಳಿದಿದ್ದ ಹಣ ಬಿಡುಗಡೆ

ವಿದ್ಯುತ್ ಕಡಿತದ ಆತಂಕವೂ ದೂರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೇಶನಗಳ ತಲಾಷ್ ಆರಂಭಿಸಿರುವ ನಡುವೆಯೇ ಖಾಸಗಿ ಕಟ್ಟಡಗಳಿಗೆ ಸರ್ಕಾರ ಬಾಡಿಗೆ ಹಣ ಬಿಡುಗಡೆ ಮಾಡಿದೆ.
ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ 5 ತಿಂಗಳಿಂದ ಬಾಡಿಗೆ ಸಂದಾಯವಾಗಿರಲಿಲ್ಲ. ಹಲವು ಕಟ್ಟಡಗಳ ಮಾಲೀಕರು ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡುತ್ತಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟಡ ಮಾಲೀಕರ ಮನವೊಲಿಸಿ ದಿನದೂಡಲು ಹರಸಾಹಸ ನಡೆಸುತ್ತಿದ್ದರು. ಏತನ್ಮಧ್ಯೆ ಸರ್ಕಾರ ಅಷ್ಟೂ ಅಂಗನವಾಡಿಗಳ ಬಾಡಿಗೆ ಹಣ ಬಿಡುಗಡೆ ಮಾಡಿದ್ದು, ಶೀಘ್ರ ಮಾಲೀಕರಿಗೆ ಬಾಡಿಗೆ ಚುಕ್ತಾ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1272 ಅಂಗನವಾಡಿ ಕೇಂದ್ರಗಳಿದ್ದು 984 ಸ್ವಂತ ಕಟ್ಟಡಗಳಲ್ಲಿ, 4 ಅಂಗನವಾಡಿಗಳು ಪಂಚಾಯಿತಿ ಕಟ್ಟಡಗಳಲ್ಲಿ, 58 ಸಮುದಾಯ ಭವನದಲ್ಲಿ, 85 ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ 139 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಷ್ಟೂ ಕಟ್ಟಡಗಳಿಗೆ 5 ತಿಂಗಳಿಂದ ಬಾಡಿಗೆ ಪಾವತಿಸಿರಲಿಲ್ಲ. ಇದರಿಂದ ಅಂಗನವಾಡಿ ಸಿಬ್ಬಂದಿ ಮುಜುಗರ ಎದುರಿಸುವಂತಾಗಿತ್ತು. ಪ್ರತಿ ದಿನ ಅಧಿಕಾರಿಗಳಿಗೆ ಕರೆ ಮಾಡಿ ಸಿಬ್ಬಂದಿ ಸಂಕಷ್ಟ ತೋಡಿಕೊಳ್ಳುತ್ತಿದ್ದರು. ಈ ಬಗ್ಗೆ ಇಲಾಖೆ ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆಗೆ ಎದುರು ನೋಡುತ್ತಿತ್ತು.

ಸರಾಸರಿ 3-5 ಸಾವಿರ ರೂ.: ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡಗಳಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ನಗರ ಕಟ್ಟಡಗಳಿಗೆ 5 ಸಾವಿರ ರೂ. ನಿಗದಿಯಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಮಾಲೀಕರಿಗೂ ಬಾಡಿಗೆ ಚುಕ್ತಾ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಬಿಲ್‌ಗೂ ಹಣ ಪಾವತಿ: ಬಾಡಿಗೆ ಕಟ್ಟಡಗಳಿಗೆ ಬಾಡಿಗೆ ಬಾಕಿಯಷ್ಟೇ ಅಲ್ಲದೆ ವಿದ್ಯುತ್ ಬಿಲ್ ಸಹ ಬಾಕಿ ಉಳಿಸಿಕೊಂಡಿದ್ದರಿಂದ ಹಲವು ಕಟ್ಟಡಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಆದರೆ ಅಂಗನವಾಡಿ ಸಿಬ್ಬಂದಿ ಬೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿ ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ಪಡೆದುಕೊಂಡಿದ್ದರು ಎನ್ನಲಾಗಿದೆ. ಇನ್ನೂ ಕೆಲವು ಕಡೆ ಅಂಗನವಾಡಿ ಸಿಬ್ಬಂದಿಯೇ ಸ್ವಂತ ಹಣ ಪಾವತಿ ಮಾಡಿ ವಿದ್ಯುತ್ ಸೌಕರ್ಯ ಉಳಿಸಿಕೊಳ್ಳಲು ಪರದಾಡಿದ್ದರು. ಇದೆಲ್ಲಕ್ಕೂ ಈ ಬಾರಿ ಅನುದಾನ ಬಿಡುಗಡೆಯಾಗಿದ್ದು, ಸದಾ ವಿದ್ಯುತ್ ಕಡಿತ ಆತಂಕ ಎದುರಿಸುತ್ತಿದ್ದ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.


ಸ್ವಂತ ಕಟ್ಟಡ ನಿರ್ಮಾಣಕ್ಕೆ ಹೆಜ್ಜೆ: ಸರ್ಕಾರದ ಅನುದಾನ ವಿಳಂಬವಾಗುವುದರಿಂದ ಆಗಾಗ ಬಾಡಿಗೆ ಹಣ ಪಾವತಿಸಲು ತೊಂದರೆಯಾಗುತ್ತದೆ. ಜತೆಗೆ ಕೆಲವೊಂದು ಸಮಸ್ಯೆಗಳೂ ಇವೆ. ಈ ಹಿನ್ನೆಲೆಯಲ್ಲಿ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ನಿವೇಶನಗಳ ಹುಡುಕಾಟ ನಡೆಯುತ್ತಿದೆ. ಪ್ರಸ್ತುತ 121 ನಿವೇಶನಗಳ ಅಗತ್ಯವಿದ್ದು, ಇದಕ್ಕಾಗಿ ಆಯಾ ತಾಲೂಕುಗಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರ ಪಟ್ಟಣ ಪ್ರದೇಶಗಳಲ್ಲಿ ಆಯುಕ್ತರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪತ್ರ ಬರೆದಿದ್ದು ನಿವೇಶನಗಳನ್ನು ಗುರುತಿಸಿಕೊಡುವಂತೆ ಮನವಿ ಮಾಡಿದೆ.


ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳ ಕಟ್ಟಡಗಳಿಗೆ ಕಳೆದ 5 ತಿಂಗಳಿಂದ ಬಾಡಿಗೆ ಬಾಕಿ ಉಳಿದುಕೊಂಡಿತ್ತು. ಹಾಗೆಯೇ ವಿದ್ಯತ್ ಬಿಲ್ ಕಟ್ಟಬೇಕಿತ್ತು. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಕ್ರಮಕೈಗೊಳ್ಳಲಾಗಿದೆ.
ನಟರಾಜ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ