ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ಸರ್ಕಾರಿ ಮಾಂಟೆಸ್ಸರಿ ರೂಪಕೊಡುವ ಜತೆಗೆ ಅಂಗನವಾಡಿಗಳ ಪುನಶ್ಚೇತನಕ್ಕೆ ಮುಂದಾಗಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆಯಲ್ಲಿನ ಅಂಗನವಾಡಿ ಶಿಕ್ಷಕಿಯರ ಶೈಕ್ಷಣಿಕ ವಿದ್ಯಾರ್ಹತೆಯ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ರವಾನಿಸಿದೆ.
ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಮಾಂಟೆಸ್ಸರಿ ಆರಂಭಿಸುವ ಸರ್ಕಾರದ ಚಿಂತನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲೇ ಪೂರ್ವಶಿಕ್ಷಣ ಆರಂಭಿಸುವ ಸಂಬಂಧ ಇರುವ ಅಂಗನವಾಡಿ ಶಿಕ್ಷಕಯರಿಗೆ ವಿಶೇಷ ತರಬೇತಿ ನೀಡುವ ಮೂಲಕ ಅಂಗನವಾಡಿಗಳಿಗೆ ಮರುಸ್ಪರ್ಶ ನೀಡುವ ನಿಟ್ಟಿನಲ್ಲಿ ಇಲಾಖೆ ಮುಂದಡಿ ಇಟ್ಟಿದೆ.
ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿ ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರಿಗೆ ಮಾಂಟೆಸ್ಸರಿ ತರಗತಿ ನಡೆಸಲು ಬೇಕಾಗಿರುವ ತರಬೇತಿ ನೀಡುವ ಸಂಬಂಧ ಅವರ ಶೈಕ್ಷಣಿಕ ವಿದ್ಯಾರ್ಹತೆಯ ಲಿಸ್ಟ್ ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಪಿಯುಸಿ ಹಾಗೂ ಪದವಿ ಪಡೆದಿರುವ ಶಿಕ್ಷಕಿಯರಿದ್ದು ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿ ನೀಡುವ ಸಂಬಂಧ ಸರ್ಕಾರ ಎಲ್ಲ ಜಿಲ್ಲೆಗಳಿಂದ ಮಾಹಿತಿ ಕೇಳಿದ್ದು, ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2 ತಿಂಗಳ ಹಿಂದೆಯೇ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದೆ.
ಸ್ಮಾರ್ಟ್ ಕ್ಲಾಸ್: ಸಿಎಸ್‌ಆರ್ ಅನುದಾನದಡಿ ನಿರ್ಮಾಣವಾಗಿರುವ ಜಿಲ್ಲೆಯ ಹಲವು ಅಂಗನವಾಡಿಗಳು ಖಾಸಗಿ ಶಾಲೆಗಳ ಮಾಂಟೆಸ್ಸರಿಗಳಿಗಿಂತಲೂ ಸುಸಜ್ಜಿತವಾಗಿವೆ. ಒಳ್ಳೆಯ ಗಾಳಿ, ಬೆಳಕು ಸೇರಿ ಮೂಲಸೌಕರ್ಯಗಳುಳ್ಳ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಎಲ್ಲ ಅನುಕೂಲಗಳಿವೆ. ಇವೆ ಅಂಗನವಾಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಿ ಗ್ರಾಮೀಣ ಭಾಗದ ಪುಟಾಣಿಗಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲು ಉತ್ತಮ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಗನವಾಡಿಗಳಲ್ಲಿ ಮುಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಿಸಿಕೊಂಡು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲು ಚಿಂತನೆ ನಡೆದಿದೆ.
ಹೊಸ ಸ್ಮಾರ್ಟ್‌ಪೋನ್: ಈ ಹಿಂದೆ ಕಳೆದ ನಾಲ್ಕೈದು ವರ್ಷದ ಹಿಂದೆ ಅಂಗನವಾಡಿ ಸಿಬ್ಬಂದಿಗೆ ನೀಡಿದ್ದ ಸ್ಮಾರ್ಟ್‌ಪೋನ್‌ಗಳನ್ನು ವಾಪಸ್ ಪಡೆಯುತ್ತಿರುವ ಇಲಾಖೆ ಹೊಸ ಮೊಬೈಲ್‌ಗಳನ್ನು ವಿತರಿಸುತ್ತಿದೆ. 4 ಜಿಪಿ ರ‌್ಯಾಮ್ ಹೊಂದಿರುವ ಹೊಸ ಸ್ಮಾರ್ಟ್‌ಪೋನ್‌ನಿಂದ ಅಂಗನವಾಡಿ ಕೆಲಸಗಳು ಮತ್ತಷ್ಟು ಚುರುಕಾಗಿ ನಡೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಆತಂಕ ದೂರ: ರಾಜ್ಯ ಸರ್ಕಾರ ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿ ಕೇಂದ್ರಗಳಿಗೆ ಬರಬೇಕಿದ್ದ ಫಲಾನುಭವಿ ಮಕ್ಕಳು ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳು ಮುಚ್ಚುವ ಆತಂಕದ ಸ್ಥಿತಿ ಇದೆ ಎಂಬ ಆತಂಕ ಸಿಐಟಿಯು ಕಡೆಯಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳನ್ನೇ ಮೇಲ್ದರ್ಜೆಗೇರಿಸಿ ಅಲ್ಲಿಯೇ ಮಾಂಟೆಸ್ಸರಿ ಆರಂಭಿಸುವ ಸಿದ್ದತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಅಪ್‌ಡೇಟ್: ಸಾಮಾನ್ಯವಾಗಿ ಅಂಗನವಾಡಿಗಳಲ್ಲಿ ಆಟ, ಹಾಡು ಇನ್ನಿತರ ಪಠ್ಯೇತರ ಚಟುವಟಿಕೆಳಿಗೆ ಒತ್ತು ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಆಟದೊಂದಿಗೆ ಪಾಠಕ್ಕೆ ಒತ್ತು ನೀಡಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿಯ ಮಾಂಟೆಸ್ಸರಿ ಹಾಗೂ ಮುಂದಿನ ಶಿಕ್ಷಕಣಕ್ಕೆ ಮಕ್ಕಳನ್ನು ಅಣಿಗೊಳಿಸಬೇಕಿರುವುದರಿಂದ ಅದೇ ಮಾದರಿ ಅನುಸರಿಸುವುದು ಇಂದಿನ ದಿನಮಾನದಲ್ಲಿ ಅವಶ್ಯಕ ಎಂಬ ಅಭಿಪ್ರಾಯ ಕೇಳಿಬರುತ್ತಿದೆ ಈ ಹಿನ್ನೆಲೆಯಲ್ಲಿ ಅಂಗನವಾಡಿಗಳನ್ನು ಅಪ್‌ಡೇಟ್ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ಪಿಯುಸಿ ಹಾಗೂ ಪದವಿ ಪಡೆದ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯಕೆಜಿ ಆರಂಭಿಸುವ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿನ ಅಂಗನವಾಡಿ ಶಿಕ್ಷಕಿಯರ ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಮಾಂಟೆಸ್ಸರಿಗಾಗಿ ವಿಶೇಷ ತರಬೇತಿ ನೀಡುವ ಚಿಂತನೆ ಇದೆ.
ಮುದ್ದಣ್ಣ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ