ಎಫ್‌ಆರ್‌ಎಸ್ ರದ್ದತಿಗೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಂಗನವಾಡಿಗಳಲ್ಲಿ ಮುಖ ಚರ್ಯೆ ಗುರುತಿಸುವ ಯೋಜನೆ (ಎಫ್‌ಆರ್‌ಎಸ್) ರದ್ದುಪಡಿಸುವುದೂ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಕಲಬುರಗಿ ಸ್ಟೇಷನ್ ಬಜಾರ್ ಅಂಚೆ ಕಚೇರಿ ಎದುರು ಗುರುವಾರ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
೨೦೧೩ರ ಆಹಾರ ಕಾಯ್ದೆ ಪ್ರಕಾರ ಯವುದೇ ಫಲಾನುಭವಿ ಹಸಿವಿನಿಂದ ನರಳಬಾರದು. ಸುಪ್ರೀಂಕೋರ್ಟ್ ಆಶಯದ ಪ್ರಕಾರ ಆಧಾರ್ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಮತ್ತು ಉಚಿತ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳಿಗೆ ವಂಚನೆಯಾಗಬಾರದು ಎಂದಿದೆ. ಆದರೆ ಇದನ್ನು ಸಂರಕ್ಷಣೆ ಮಾಡಬೇಕಾದ ಸರ್ಕಾರಗಳು ಇಂದು ಎಫ್‌ಆರ್‌ಎಸ್ ಕಡ್ಡಾಯಗೊಳಿಸುವ ಮೂಲಕ ಫಲಾನುಭವಿಗಳ ಹಕ್ಕು ನಿರಾಕರಿಸುತ್ತಿವೆ ಎಂದು ದೂರಿದರು.
ಎಫ್‌ಆರ್‌ಎಸ್ ಮೂಲಕ ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಶೇ.೬೦ರಷ್ಟು ವಂತಿಗೆ ನೀಡಬೇಕಾದ ಕೇಂದ್ರ ಸರ್ಕಾರ ಎಫ್‌ಆರ್‌ಎಸ್ ಮೂಲಕ ತನ್ನ ಪಾಲಿನ ಹಣ ಕಡಿಮೆ ಮಾಡಲು ಮುಂದಾಗಿದೆ. ಚಟುವಟಿಕೆ ಆಧಾರದಲ್ಲಿ ಹಣ ಬಿಡುಗಡೆ ಮಾಡುವ ವಿಧಾನ ಮತ್ತು ಭಾರತದಲ್ಲಿ ಐಸಿಡಿಎಸ್ ಫಲಾನುಭವಿಗಳನ್ನು ಕಡಿಮೆ ತೋರಿಸಿ ಹಣ ಕಡಿತ ಮಾಡುವ ಯೋಜನೆ ಇದಾಗಿದೆ ಎಂದು ಆಪಾದಿಸಿದರು.