ಜಿಲ್ಲೆ

ಅಂಗನವಾಡಿ ಕಾರ್ಯಕತೆಯರ ಮೊಬೈಲ್‌ಗಿಲ್ಲ ರಿಚಾರ್ಜ್‌

Uttara Kannada - Subash Hegde

ಸುಭಾಸ ಧೂಪದಹೊಂಡ ಕಾರವಾರ : ಬಿಲ್ ಬಾಕಿ ಕಾರಣ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದ ವತಿಯಿಂದ ನೀಡಿದ್ದ ಬಿಎಸ್‌ಎನ್‌ಎಲ್ ಸಿಮ್‌ಗಳಿಗೆ ಡೇಟಾ ರೀಚಾರ್ಜ್ ಸ್ಥಗಿತ ಮಾಡಲಾಗಿದೆ.

ಇದರಿಂದ ಮಹಿಳೆಯರ, ಮಕ್ಕಳ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಕೆಲ ಗ್ರಾಮೀಣ ಭಾಗದ ಕಾರ್ಯಕರ್ತೆಯರು ಪ್ರತಿ ದಿನ ಮೂರ್ನಾಲ್ಕು ಕಿಮೀ ನಡೆಯಬೇಕಾದ ಪರಿಸ್ಥಿತಿ ಇದೆ.

ಜಿಲ್ಲೆಯಲ್ಲಿ 2687 ಅಂಗನವಾಡಿ ಕೇಂದ್ರಗಳಿದ್ದು, ಅಷ್ಟೇ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅದರಲ್ಲಿ 1053 ಕಾರ್ಯಕರ್ತೆಯರಿಗೆ ಬಿಎಸ್‌ಎನ್‌ಎಲ್ ಸಿಮಿ ವಿತರಿಸಲಾಗಿದ್ದು, ಆ ಸಿಮ್‌ಗಳಿಗೆ ಡೇಟಾ ರೀಚಾರ್ಜ್ ಖಾಲಿಯಾಗಿ ಮೂರು ತಿಂಗಳು ದಾಟಿದೆ.

ಆದರೆ, ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ ಬರುತ್ತಿದ್ದು, ಅವರು ಆ್ಯಪ್‌ನಲ್ಲಿ ದಾಖಲೆ ಅಪ್‌ಲೋಡ್ ಮಾಡಲು ಸಿಡಿಪಿಒ ಕಚೇರಿಗೆ ತೆರಳಬೇಕು. ಇಲ್ಲವೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಬೇಕಾದ ಪರಿಸ್ಥಿತಿ ಇದೆ.

ಇನ್ನುಳಿದ 1634 ಕಾರ್ಯಕರ್ತೆಯರಿಗೆ ಏರ್‌ಟೆಲ್ ಸಿಮ್ ವಿತರಿಸಲಾಗಿದ್ದು, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.


ಮೊಬೈಲ್‌ನಲ್ಲಿ ಕೆಲಸವೇನು..?

ಸಮುಗ್ರ ಶಿಶು ಅಭಿವೃದ್ಧಿ ಯೋಜನೆ, ಮಾತೃಪೂರ್ಣ, ಮಾತೃ, ವಂದನಾ, ಮಾತೃಶ್ರೀ, ಭಾಗ್ಯ ಲಕ್ಷ್ಮೀ ಹೀಗೆ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳಿವೆ.

ಮಕ್ಕಳ ಎತ್ತರ, ತೂಕವನ್ನು ನಿರಂತರವಾಗಿ ದಾಖಲಿಸಬೇಕು. ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಊಟ, ನೀಡಬೇಕು. ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು.

ಅಪೌಷ್ಠಿಕ ಮಕ್ಕಳಿಗೆ ಔಷಧ ನೀಡಬೇಕು ಹೀಗೆ ವಿವಿಧ ಯೋಜನೆಗಳಡಿ ಸುಮಾರು 40 ಕಡತಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನಿಭಾಯಿಸಬೇಕಾಗುತ್ತಿತ್ತು.

ಅವುಗಳನ್ನು ತಪ್ಪಿಸುವ ಸಲುವಾಗಿ 2018 ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಿ ಅದಕ್ಕೆ ಪ್ರತಿ ತಿಂಗಳು ಒಂದಿಷ್ಟು ಡೇಟಾ ನೀಡಲಾಗುತ್ತಿತ್ತು. ಪ್ರತಿ ತಿಂಗಳು ರೀಚಾರ್ಜ್ ಕೂಡ ಮಾಡಿಸಲಾಗುತ್ತಿತ್ತು.

`ಸ್ನೇಹಾ' ಸೇರಿ ವಿವಿಧ ಆ್ಯಪ್‌ಗಳ ಮೂಲಕ ಈ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಯಿತು. ಸದ್ಯ ಪೋಶಣ್ ಟ್ರಾ÷್ಯಕರ್ ಆ್ಯಪ್‌ನಲ್ಲಿ ಮಕ್ಕಳ ಆಧಾರ ಕಾರ್ಡ್ ದಾಖಲಿಸಬೇಕಿದೆ.

ಇನ್ನು ಅವರ ಎತ್ತರ, ತೂಕ ಮುಂತಾದವುಗಳನ್ನು ದಾಖಲಿಸಬೇಕಿದೆ. ಅಂಗನವಾಡಿ ಕಾರ್ಯಕರ್ತೆಯರು ಈ ಹೊಸ ವ್ಯವಸ್ಥೆಗೆ ಹೊಂದಿಕೊಂಡರು ಎನ್ನುವ ಹೊತ್ತಿಗೆ ಮೊಬೈಲ್ ಡೇಟಾವನ್ನೇ ನೀಡುವುದನ್ನೇ ಬಂದ್ ಮಾಡಲಾಗಿದೆ.


ನೆಟ್ವರ್ಕ್ ಸಮಸ್ಯೆ: ಜಿಲ್ಲೆ ಗುಡ್ಡಗಾಡಿನಿಂದ ಕೂಡಿರುವುದರಿಂದ ಹಲವೆಡೆ ನೆಟ್ವರ್ಕ್ ಸಮಸ್ಯೆ ಇದೆ. ಬಿಎಸ್‌ಎನ್‌ಎಲ್ ಡೇಟಾ ಸ್ಥಗಿತವಾಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಜವಾಬ್ದಾರಿ ನಿಭಾಯಿಸುವ ಜತೆಗೆ ಪ್ರತಿ ದಿನ ಡೇಟಾ ಅಪ್‌ಲೋಡ್ ಮಾಡುವ ಸಲುವಾಗಿ ಮೂರ್ನಾಲ್ಕು ಕಿಮೀ ನಡೆಯಬೇಕಾದ ಪರಿಸ್ಥಿತಿ ಇದೆ.

ಐದು ವರ್ಷಗಳ ಹಿಂದೆ ನೀಡಿದ ಮೊಬೈಲ್‌ಗಳೂ ಹಾಳಾಗಿವೆ. ಅವುಗಳನ್ನು ನಿಮ್ಮದೇ ಖರ್ಚಿನಿಂದ ರಿಪೇರಿ ಮಾಡಿಸಿಕೊಳ್ಳಿ ಎಂದು ಕಚೇರಿಯಿಂದ ಒತ್ತಡ ಹೇರಲಾಗುತ್ತಿದೆ. ಆ್ಯಪ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡಲು ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಆದರೆ, ಡೇಟಾ ಮಾತ್ರ ನೀಡುತ್ತಿಲ್ಲ.ಜಯಶ್ರೀ ಹಳಿಯಾಳಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ…….