ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜ.16ರಂದು ಪ್ರಖ್ಯಾತ ಅಂಗಮಣಿ ಉತ್ಸವ ನಡೆಯಲಿದೆ.
ಅಂಗಮಣಿಯಂದು ದೇವಿಯರಿಗೆ ಮಡಿಲು ತುಂಬುವ ಕೈಂಕರ್ಯ ನಡೆಯಲಿದ್ದು, ಸಹಸ್ರಾರು ಭಕ್ತರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೇಲುಕೋಟೆ ದೇವಾಲಯದಲ್ಲಿ ಮಕರ ಸಂಕ್ರಮಣ ಮತ್ತು ಕನೂಹಬ್ಬ ವೈಭವವಾಗಿ ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿ ಹಬ್ಬದಂದು ನಾಲ್ಕನೇ ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್‌ಗುರೂಜಿ ಮತ್ತವರ ಮನೆತನ ಯತಿರಾಜದಾಸರ್ ಗುರುಪೀಠದ ಸೇವಾ ಕೈಂಕರ್ಯ ನಡೆದರೆ ಅಂಗಮಣಿ ಉತ್ಸವದಂದು ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ ಮತ್ತು ಮೂರನೇ ಸ್ಥಾನೀಕ ಸಜ್ಜೆಹಟ್ಟಿ ತಿರುನಾರಾಯಣಯ್ಯಂಗಾರ್ ಗುರುಪೀಠದ ಸೇವಾ ಕೈಂಕರ್ಯಗಳು ವೈಭವದಿಂದ ನಡೆಯಲಿವೆ.
15ರಂದು ಸೋಮವಾರ ಬೆಳಗ್ಗೆ ಮಕರಸಂಕ್ರಾಂತಿ ಅಂಗವಾಗಿ ರಾಮಾನುಜರ ಸಮೇತ ಶ್ರೀದೇವಿಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿಗೆ ಸಂಕ್ರಮಣ ಪುಣ್ಯಕಾಲದ ವಿಶೇಷ ಅಭಿಷೇಕ ವೇದ ಮಂತ್ರದೊಂದಿಗೆ ನೆರವೇರಲಿದೆ. ಸಂಜೆ 5 ಗಂಟೆಯ ವೇಳೆಗೆ ಚೆಲುವನಾರಾಯಣಸ್ವಾಮಿಗೆ ಯತಿರಾಜದಾಸರ್ ಮನೆಯ ಮುಂಭಾಗ ಪುಷ್ಪ ಕೈಂಕರ್ಯ ಸೇವೆ ನಡೆದರೆ, ಕೊಠಾರ ಮಂಟಪದಲ್ಲಿ ಸಂಕ್ರಾಂತಿ ಫಲದ ಪಠಣ ನೆರವೇರಲಿದೆ. ರಾತ್ರಿ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ವಸಂತರಾಗ ಮಹೋತ್ಸವ ನೆರವೇರಲಿದೆ.
ಅಂಗಮಣಿ ಉತ್ಸವ: ಮಕರ ಸಂಕ್ರಾಂತಿಯ ಮರುದಿನವಾದ ಜನವರಿ 16ರ ರಾತ್ರಿ ಮೇಲುಕೋಟೆ ಕನೂಹಬ್ಬದ ನಿಮಿತ್ತ ಅಂಗಮಣಿ ಉತ್ಸವ ವೈಭವದಿಂದ ನೆರವೇರಲಿದೆ. ಅಂದು ಬೆಳಗ್ಗೆ ಶ್ರೀದೇವಿ-ಭೂದೇವಿಯರಿಗೆ ಅಭಿಷೇಕ ಮಧ್ಯಾಹ್ನ ಕಲ್ಯಾಣಿಗೆ ಉತ್ಸವ ನಡೆಯುತ್ತದೆ.
ಸಂಜೆ ಸಜ್ಜೆಹಟ್ಟಿ ತಿರುನಾರಾಯಣಯ್ಯಂಗಾರ್ ಮತ್ತು ಕರಗಂ ಮನೆಗಳಲ್ಲಿ ದೇವಿಯರಿಗೆ ಅರ್ಪಿಸಲು ಜೋಡಿಸಿರುವ ಫಲ ಪುಷ್ಪ ತರಕಾರಿಗಳ ತಟ್ಟೆಗಳನ್ನು ವೀಕ್ಷಿಸಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ.
ರಾತ್ರಿ 8 ಗಂಟೆಗೆ ಶ್ರೀದೇವಿ-ಭೂದೇವಿಯರಿಗೆ ಸಜ್ಜೆಹಟ್ಟಿ ಮಂಟಪದಲ್ಲಿ ಪ್ರಮುಖ ಆಕರ್ಷಣೆಯಾದ ಮಡಿಲು ತುಂಬುವ ವಿಶೇಷ ಧಾರ್ಮಿಕ ಕೈಂಕರ್ಯ ನೆರವೇರಲಿದೆ. ನಂತರ ನಾಲ್ಕೂ ಸ್ಥಾನೀಕರಿಗೆ ಮಾಲೆ-ಮರ್ಯಾದೆ ನಡೆದ ನಂತರ ಚತುರ್ವೀದಿಗಳಲ್ಲಿ ದೇವಿಯರ ಉತ್ಸವ ನಡೆಯಲಿದೆ.
ಇದೇ ವೇಳೆ ಚೆಲುವನಾರಾಯಣಸ್ವಾಮಿಗೆ ಅಶ್ವವಾಹನೋತ್ಸವ ನಡೆದು ದಾರಿ ಮಧ್ಯೆ ಮೊಲ ಅಡ್ಡಬರುವ ಸಾಂಪ್ರದಾಯಿಕ ಆಚರಣೆಯ ಮುಗಿಸಿ ದಲಿತ ಸೇವಾರ್ಥದಾರರಿಗೆ ಮರ್ಯಾದೆ ಪ್ರಸಾದ ಸಮರ್ಪಣೆಯ ನಂತರ ಅಶ್ವವಾಹನೋತ್ಸವ ಮರಳಿ ದೇವಾಲಯಕ್ಕೆ ತಲುಪಲಿದೆ. ಜನವರಿ 17ರಂದು ಅಳ್ಳುಂತಳ್ಳುಂ ಚರುಪಿನ ಸೇವೆ ನಡೆದು ಅಂಗಮಣಿಯಲ್ಲಿ ದೇವಿಯರಿಗೆ ಅರ್ಪಿಸಲು ಜೋಡಿಸಿದ್ದ ತಟ್ಟೆಗಳಿಂದ ಮೇಲುಕೋಟೆಯ ವಿಶಿಷ್ಟ ಪ್ರಸಾದವಾದ ಕದಂಬ, ದದಿಯೋದನ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ.