ಆನೇಕಲ್: ಬನ್ನೇರುಘಟ್ಟ ಸಮೀಪದ ಶಾನುಭೋಗನಹಳ್ಳಿಯ ಬ್ಯಾಟರಾಯನದೊಡ್ಡಿ ಕೆರೆಗೆ ಕಾರ್ಖಾನೆಗಳ ಕಲುಷಿತ ನೀರು ಹರಿದು ಮೀನುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಂಗಳವಾರ ತಹಸೀಲ್ದಾರ್ ಶಿವಪ್ಪ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೇರವಾಗಿ ಕೆರೆಗೆ ಹರಿಯುತ್ತಿರುವುದರಿಂದ ಸೋಮವಾರ ಸಾವಿರಾರು ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿರುವ ಬಗ್ಗೆ ಬಂದ ದೂರು ಆಧರಿಸಿ ಸ್ಥಳ ಪರಿಶೀಲಿಸಿದರು.
ಗ್ರಾಮದ ಎಲ್ಲೆಡೆ ಸಂಚರಿಸಿ ಪರಿಶೀಲಿಸಲಾಗಿದೆ. ಅಕ್ರಮವಾಗಿ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಬರುವವರೆಗೂ ವಿದ್ಯುತ್ ಸಂಪರ್ಕ ನೀಡದಂತೆ ಸೂಚಿಸಲಾಗಿದೆ. ಎಷ್ಟೇ ಪ್ರಭಾವಿಗಳು ಅಕ್ರಮ ನಡೆಸಿದರೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಡಿಒಗೆ ತರಾಟೆ: ತ್ಯಾಜ್ಯ ಹರಿಯುತ್ತಿದ್ದ ರಾಜಕಾಲುವೆ ಹಾಗೂ ರಾಸಾಯನಿಕ ಹರಿಯುತ್ತಿದ್ದ ಸ್ಥಳಗಳನ್ನು ಪರಿಶೀಲಿಸಿದ ತಹಸೀಲ್ದಾರ್, ಸಮೀಪದಲ್ಲಿದ್ದ ಸೀರೆಗೆ ಬಣ್ಣ ಹಾಕುವ ಘಟಕದ ಬಾಗಿಲು ತೆರೆದು ಪರಿಶೀಲಿಸಿದರು. ಅಕ್ರಮ ತಡೆಯದ ಬನ್ನೇರುಘಟ್ಟ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾವಿರಾರು ಮೀನುಗಳ ಸಾವು: ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ಕೆರೆಯೊಡಲು ಸೇರುತ್ತಿರುವುದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಗ್ರಾಪಂಗೆ ಹಣ ನೀಡಿ ಟೆಂಡರ್ ಪಡೆದು ಕೆರೆಯಲ್ಲಿ ಮೀನು ಸಾಕಣೆ ಮಾಡಿ ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರೈತ ಸುರೇಂದ್ರ ಅಲವತ್ತುಕೊಂಡರು.
ಕ್ರಮ ಕೈಗೊಳ್ಳದ ಅಧಿಕಾರಿಗಳು: ಈ ಭಾಗದಲ್ಲಿ ಗ್ರಾಪಂ ಮಾಜಿ ಸದಸ್ಯರೂ ಸೇರಿ ಹಲವರು ಅಕ್ರಮವಾಗಿ ಸೀರೆಗಳಿಗೆ ಬಣ್ಣ ಲೇಪಿಸುವ ಕಾರ್ಖಾನೆಗಳನ್ನು ತೆರೆದಿದ್ದಾರೆ. ಆದರೂ ಅಧಿಕಾರಿಗಳು ಕಾಣದಂತೆ ಇದ್ದಾರೆ. ರಾಸಾಯನಿಕ ತ್ಯಾಜ್ಯದಿಂದ ಮೀನುಗಳು ಸಾವನ್ನಪ್ಪಿದರೂ ಬನ್ನೇರುಘಟ್ಟ ಗ್ರಾಪಂ ಅಧಿಕಾರಿಗಳು ಇತ್ತ ಸುಳಿದಿರಲಿಲ್ಲ.
ರಾತ್ರಿ ವೇಳೆ ಕೆರೆಯೊಡಲಿಗೆ ತ್ಯಾಜ್ಯ: ಕಾರ್ಖಾನೆಗಳ ತ್ಯಾಜ್ಯವನ್ನು ರಾತ್ರಿ ಸಮಯದಲ್ಲಿ ಕೆರೆಯೊಡಲಿಗೆ ಹರಿಸಲಾಗುತ್ತಿದೆ. ಕೆಲವೊಮ್ಮೆ ಬೇರೆ ಕಡೆಗಳಿಂದ ಟ್ಯಾಂಕರ್ ಮೂಲಕವೂ ಕೆಮಿಕಲ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈಗಾಗಲೇ ಗ್ರಾಮದಲ್ಲಿ ತೊಂದರೆ ಎದುರಾಗಿದ್ದು, ಶೀಘ್ರವೇ ಈ ಅಕ್ರಮಕ್ಕೆ ಕಡಿವಾಣ ಹಾಕಿ ಜಲಮೂಲ ಉಳಿಸಬೇಕು ಎಂದು ತಹಸೀಲ್ದಾರರಿಗೆ ಸ್ಥಳೀಯರು ಮನವಿ ಮಾಡಿದರು.