ಅಂಗಡಿಯಲ್ಲಿ ಚಿನ್ನ ಕದ್ದು ಪರಾರಿಯಾದ ಸ್ಥಳ, ನಿರಂತರ ಕಳ್ಳತನ ಹಾಗೂ ಸರಗಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ ಗುಡ್ನಳ್ಳಿ ಸಮೀಪ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 
ಜಿಲ್ಲೆ

ಆನೇಕಲ್‌ನಲ್ಲಿ ಹೆಚ್ಚಿದ ಸರಗಳವು: ಗುಡ್ನಹಳ್ಳಿ ಸುತ್ತಮುತ್ತಲ ಪ್ರದೇಶವೇ ಕಳ್ಳರ ಹಾಟ್‌ಸ್ಪಾಟ್

Bengaluru Rural

ಆನೇಕಲ್: ಪಟ್ಟಣದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜನಸಾಮಾನ್ಯರು ಆತಂಕದಿಂದ ತಿರುಗಾಡುವಂತಾಗಿದೆ. ಜನಸಂಚಾರ ಕಡಿಮೆ ಇರುವ ಸಂದರ್ಭದಲ್ಲಿ ಖದೀಮರು ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಫೀಲ್ಡ್‌ಗೆ ಇಳಿಯುತ್ತಿದ್ದಾರೆ. ಪಟ್ಟಣದಿಂದ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಗುಡ್ನಹಳ್ಳಿ ಬಳಿ ಹೆಚ್ಚು ಕೃತ್ಯ ನಡೆಯುತ್ತಿದ್ದು, ಈ ಪ್ರದೇಶವು ಕಳ್ಳತನಕ್ಕೆ ಸ್ಪಾಟ್ ಎಂಬಂತಾಗಿದೆ.

ಗುಡ್ನಹಳ್ಳಿ ಬಳಿಯ ಸಾಯಿರಾಂ ಕಾಲೇಜು ಸಮೀಪ ವಾರದಲ್ಲಿ ಎರಡು ಸರಗಳ್ಳತನ ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ಗುಡ್ನಹಳ್ಳಿ ಮಹಿಳೆ ಧನಲಕ್ಷ್ಮೀ ಎಂಬುವವರು ಬೈಕಿನಲ್ಲಿ ಆನೇಕಲ್‌ನಿಂದ ಹೊಸೂರು ಮಾರ್ಗವಾಗಿ ಹೋಗುವಾಗ ಇಬ್ಬರು ದುಷ್ಕರ್ಮಿಗಳು ಹಿಂಬಾಲಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆ ನಡೆದು ಮೂರು ದಿನದಲ್ಲೇ ಮತ್ತೆ ಅದೇ ಜಾಗದಲ್ಲಿರುವ ಚಿಲ್ಲರೆ ಅಂಗಡಿ ವ್ಯಾಪಾರಿ ಮುನಿರತ್ನಮ್ಮ ಎಂಬುವರ ಸರ ಕದ್ದು ಪರಾರಿಯಾಗಿದ್ದಾರೆ. ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದವರು ಆಕೆಯ ಗಮನ ಬೇರೆಡೆ ಸೆಳೆದು ಕತ್ತಿನಲ್ಲಿದ್ದ ಸರ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಸರ ತುಂಡಾಗಿದೆ. ಅರ್ಧ ಸರವನ್ನು ಕದ್ದು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಮುನಿರತ್ನಮ್ಮ ಕಿರುಚಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಕಳ್ಳನಿಗೆ ಕಲ್ಲಿನಲ್ಲಿ ಹೊಡೆಯಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೂ ಬೆದರಿಕೆ ಹಾಕಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೊರರಾಜ್ಯದ ಖದೀಮರು?: ಇತ್ತೀಚೆಗೆ ಆನೇಕಲ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮನೆಕಳ್ಳತನ, ಬೈಕ್ ಹಾಗೂ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ರಾಜ್ಯದ ಗಡಿ ತಾಲೂಕಾಗಿರುವುದರಿಂದ ತಮಿಳುನಾಡಿನಿಂದ ಬರುವ ಆಸಾಮಿಗಳು ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.


ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ತಂಬಾಕು ಕೇಳುವ ನೆಪದಲ್ಲಿ ಬಂದ್ದಾತ ಏಕಾಏಕಿ ಕತ್ತಿನಲ್ಲಿದ್ದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ. ನಾನು ಕೂಗಿಕೊಳ್ಳುವ ಹೊತ್ತಿಗೆ ಸ್ಥಳದಲ್ಲಿ ಹೆಚ್ಚಾಗಿ ಜನ ಇರಲಿಲ್ಲ. ಹಾಗಾಗಿ ಕಳ್ಳ ಪರಾರಿಯಾಗಿದ್ದಾನೆ.
| ಮುನಿರತ್ನಮ್ಮ ಸರ ಕಳೆದುಕೊಂಡವರು


ಕೆಲಸಕ್ಕೆ ಹೋಗಿ ಮನೆಗೆ ಬರುವಾಗ ರಾತ್ರಿಯಾಗುತ್ತಿತ್ತು. ಈ ಸಮಯದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಪಕ್ಕದಲ್ಲಿ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಸರವನ್ನು ಕಿತ್ತು ಪರಾರಿಯಾಗಲು ನೋಡಿದ್ದಾರೆ. ನಾವು ಐದಾರು ಕಿ.ಮೀ. ಹಿಂಬಾಲಿಸಿದರೂ ತಮಿಳುನಾಡು ಗಡಿ ದಾಟಿ ಪರಾರಿಯಾಗಿದ್ದಾರೆ.
|ಧನಲಕ್ಷ್ಮೀ ಚಿನ್ನದ ಸರ ಕಳೆದುಕೊಂಡವರು

ಗಡಿ ಭಾಗದಲ್ಲಿ ಈಗಾಗಲೇ ಪೊಲೀಸರನ್ನು ನಿಯೋಜಿಸಲಾಗಿದೆ. ಕಳ್ಳತನ ಮಾಡುವವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ. ನಿರ್ಜನ ಪ್ರದೇಶದಲ್ಲಿ ಹೋಗುವಾಗ ಸಾರ್ವಜನಿಕರು ಜಾಗೃತಿ ವಗಹಿಸಬೇಕು.
| ಮಲ್ಲಿಕಾರ್ಜುನ್ ಬಾಲದಂಡೆ
ಬೆಂಗಳೂರು ಗ್ರಾಮಾಂತರ ಎಸ್‌ಪಿ