ವಿಜಯವಾಣಿ ಸುದ್ದಿಜಾಲ ಆನೇಕಲ್
ಬಡವರು ನೆಮ್ಮದಿಯಾಗಿ ಜೀವನ ನಡೆಸಬೇಕಾದರೆ ಸರ್ಕಾರದ ಸೌಲಭ್ಯ ನೇರವಾಗಿ ಅರ್ಹರಿಗೆ ದೊರಕುವಂತಾಗಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ತಾಲೂಕಿನ ಎ.ಮೇಡಹಳ್ಳಿಯಲ್ಲಿ ಗುರುವಾರ ಪ್ರಜಾ ವಿಮೋಚನಾ ಚಳವಳಿಯಿಂದ ಆಯೋಜಿಸಿದ್ದ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು. ಸಂಘಟನೆ ಹಲವಾರು ವರ್ಷಗಳಿಂದ ಆನೇಕಲ್ ತಾಲೂಕು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ. ರಾಜ್ಯದ ಗಡಿ ಭಾಗದಲ್ಲಿರುವ ಮೇಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರೈತಾಪಿ ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಕ್ಕುಗಳಿಗಾಗಿ ಸಂಘಟನೆ ಮೂಲಕ ಹೋರಾಟ ಮಾಡಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಆದೂರು ದೇವರಾಜು ಮಾತನಾಡಿ, ಸಂಘಟನೆ ತಾಲೂಕಿನ ಹಲವೆಡೆ ಶಾಖೆ ತೆರೆದು ಯುವಕರನ್ನು ಸಂಘಟಿಸಿ, ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.
ಮುಖಂಡರಾದ ರವಿ, ವೆಂಕಟೇಶ್, ಚಂದ್ರಶೇಖರ್, ರಮೇಶ್, ಕೃಷ್ಣಪ್ಪ, ರವೀಂದ್ರ, ನಿಂಗಪ್ಪ, ಮುರಳಿ, ವೆಂಕಟೇಶ ಇತರರು ಇದ್ದರು.