ನವೀನ್ ಚಂದ್ರ ಶೆಟ್ಟಿ/ಚಕ್ರವರ್ತಿ ಆನೇಕಲ್
ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಇತ್ತೀಚೆಗೆ ಗಡಿಭಾಗಗಳಲ್ಲಿ ಅಪರಾಧ ಕೃತ್ಯ ಹೆಚ್ಚಾಗಲು ಚೆಕ್ ಪೋಸ್ಟ್ ಕಾರ್ಯನಿರ್ವಹಿಸದಿರುವುದೇ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಗಡಿಭಾಗಗಳಲ್ಲಿನ ಭದ್ರತಾ ವೈಫಲ್ಯದ ಸಮಸ್ಯೆಯಿಂದಾಗಿ ರಾಜ್ಯಕ್ಕೆ ಅನಾಯಾಸವಾಗಿ ಪ್ರವೇಶಿಸುವ ಆಗಂತುಕರು ದುಷ್ಕೃತ್ಯ ನಡೆಸಿ ರಾಜಾರೋಷವಾಗಿ ಗಡಿದಾಟುತ್ತಿದ್ದಾರೆ. ಇದಕ್ಕೆ ಗಡಿಭಾಗದಲ್ಲಿ ಭದ್ರತೆಗೆ ನಿರ್ಲಕ್ಷ್ಯ ತೋರುತ್ತಿರುವುದೇ ಕಾರಣ. ಈ ಕುರಿತು ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ಗಡಿಗಳಲ್ಲಿ ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿ ಮಾಹಿತಿ ಕಲೆಹಾಕಿದೆ.
ಕರ್ನಾಟಕ-ತಮಿಳುನಾಡು ಗಡಿಭಾಗಕ್ಕೆ ಒಳಪಡುವ ಸೋಲೂರು ಸಮೀಪ ನೆಪಮಾತ್ರಕ್ಕೆ ಇರುವ ಚೆಕ್‌ಪೋಸ್ಟ್‌ನಲ್ಲಿ ಯಾವೊಬ್ಬ ಸಿಬ್ಬಂದಿಯೂ ಕೆಲಸ ಮಾಡುತ್ತಿಲ್ಲ. ರಾತ್ರಿ ವೇಳೆಯಲ್ಲಿ ರಾಜ್ಯ ಪ್ರವೇಶ ಮಾಡುವ ದುಷ್ಕರ್ಮಿಗಳು ಆನೇಕಲ್, ಬೆಂಗಳೂರು ಸೇರಿ ಹಲವೆಡೆಗಳಲ್ಲಿ ಬೈಕ್ ಕಳ್ಳತನ, ಮನೆಕಳ್ಳತನ, ದರೋಡೆ ನಡೆಸಿ ಹೊರರಾಜ್ಯಗಳಿಗೆ ತೆರಳುತ್ತಿದ್ದಾರೆ. ಪ್ರಕರಣ ನಡೆದ ಬಳಿಕ ಖದೀಮರನ್ನು ಬಂಧಿಸಲು ಪೊಲೀಸರು ಹರಸಾಹಸ ನಡೆಸುವ ಬದಲು ಚೆಕ್ ಪೋಸ್ಟ್‌ನಲ್ಲಿ ಭದ್ರತೆ ಹೆಚ್ಚಿಸಿದರೆ ಸಾಕಷ್ಟು ಅಪರಾಧ ಪ್ರಕರಣಕ್ಕೆ ತಡೆ ಹಾಕಬಹುದು.
ಚೆಕ್‌ಪೋಸ್ಟ್ ನಿರ್ಮಿಸಿ: ತಾಲೂಕಿಗೆ ತಮಿಳುನಾಡಿನಿಂದ ಸಂಪರ್ಕ ಕಲ್ಪಿಸುವ ಗಡಿಗಳಾದ ಸೋಲೂರು, ಸಮಂದೂರು, ಬಳ್ಳೂರು, ಅತ್ತಿಬೆಲೆ, ಬಾಗಲೂರಿನ ಒಟ್ಟು ಐದು ಗಡಿ ಪ್ರದೇಶಗಳಿವೆ. ಆದರೆ ಎಲ್ಲಿಯೂ ಸಮರ್ಪಕ ಚೆಕ್ ಪೋಸ್ಟ್ ಇಲ್ಲ. ಆದರೆ ತಮಿಳುನಾಡು ಭಾಗದ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ತಮಿಳುನಾಡು ಸರ್ಕಾರ ನಿಯೋಜಿಸಿದೆ. ನಮ್ಮ ರಾಜ್ಯದ ಗಡಿಯಾದ ಸೋಲೂರಿನ ಚೆಕ್‌ಪೋಸ್ಟ್ ನೆಪಮಾತ್ರಕ್ಕೆ ಎಂಬಂತೆ ಇದ್ದು, ಪ್ರಸ್ತುತ ಪ್ರಯೋಜನಕ್ಕೆ ಬಾರದೆ ಅನೈತಿಕ ಚಟುವಟಿಕೆಗಳ ತಾಣಗಳಾಗಿದೆ.
ಹಬ್ಬ ಹರಿದಿನಗಳಲ್ಲಿ ಕಾರ್ಯೋನ್ಮುಖ: ಚುನಾವಣೆ ಹಾಗೂ ಹಬ್ಬಗಳ ಸಮಯದಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ನೆಪ ಮಾತ್ರಕ್ಕೆ ಪೊಲೀಸರನ್ನು ನೇಮಿಸಲಾಗುವುದು. ಬಳಿಕ ಹೇಳೋರಿಲ್ಲ ಕೇಳೋರಿಲ್ಲ ಎಂಬ ಸ್ಥಿತಿ ಇದೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಹೊರಭಾಗದಿಂದ ಬಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಆನೇಕಲ್ ತಾಲೂಕಿನಲ್ಲಿ ಐದು ಗಡಿಗಳಿವೆ. ಆದರೆ ಎಲ್ಲಿಯೂ ಸಮರ್ಪಕವಾದ ಚೆಕ್‌ಪೋಸ್ಟ್ ಇಲ್ಲ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಜನ ಸಂಜೆಯಾದರೆ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ಚೆಕ್ ಪೋಸ್ಟ್ ನಿರ್ಮಿಸಿ, ಸಿಬ್ಬಂದಿ ನಿಯೋಜಿಸಬೇಕು.
| ಸಿ.ತೋಪಯ್ಯ ಹೋರಾಟಗಾರರು ಸೋಲೂರು ಗ್ರಾಮಸ್ಥ
ಸೋಲೂರು ಗಡಿಯಲ್ಲಿ ಪ್ರತಿದಿನ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತೇವೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕರ್ನಾಟಕದ ಗಡಿಗೆ ಪೊಲೀಸರು ಬರುತ್ತಾರೆ. ಅದಾದ ಬಳಿಕ ಚೆಕ್ ಪೋಸ್ಟ್ ಇಲ್ಲದಂತಾಗುತ್ತದೆ.
| ಸಿದ್ದಿಕ್ ಪಾಷಾ ನೌಕರ ತಮಿಳುನಾಡಿನ ಚೆಕ್ ಪೋಸ್ಟ್
ಕೇರಳ ಹಾಗೂ ತಮಿಳುನಾಡಿನಿಂದ ಆನೇಕಲ್‌ನ 5 ಭಾಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಐಜಿಪಿ ಹಾಗೂ ಎಸ್ಪಿ ಜತೆ ಮಾತನಾಡಲಾಗುವುದು. ಈಗಾಗಲೇ ಹೊರ ರಾಜ್ಯದಿಂದ ಬಂದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
| ಎ. ನಾರಾಯಣಸ್ವಾಮಿ, ಕೇಂದ್ರ ಸಚಿವ