ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಮೀಪದ ಕಲ್ಕರೆ ಅರಣ್ಯದಲ್ಲಿ ಅರಣ್ಯಾಧಿಕಾರಿಗಳ ಶೂಟೌಟ್‌ಗೆ ಶ್ರೀಗಂಧ ಚೋರನೊಬ್ಬ ಮೃತಪಟ್ಟಿದ್ದಾನೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ನಟ್ಟೂರಹಳ್ಳಿಯ ತಿಮ್ಮರಾಯಪ್ಪ(40) ಮೃತ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಗಂಧದ ಮರಗಳು ಕಳವಾಗುತ್ತಿರುವ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಕಲ್ಕೆರೆ ಬಳಿ ಮಂಗಳವಾರ ತಡರಾತ್ರಿ ಮರ ಕಡಿಯುತ್ತಿರುವ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಇಬ್ಬರು ಖದೀಮರು ಮರಕಡಿಯುತ್ತಿರುವುದು ಕಂಡುಬಂದಿದೆ. ಸಿಬ್ಬಂದಿ ಕಳ್ಳರನ್ನು ಶರಣಾಗುವಂತೆ ಸೂಚನೆ ನೀಡಿದ ವೇಳೆ ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆತ್ಮರಕ್ಷಣೆಗೆ ಅರಣ್ಯ ಇಲಾಖೆ ನೌಕರ ವಿನಯ್ ಫೈರಿಂಗ್ ಮಾಡಿದ್ದಾರೆ. ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಮರ ಕಡಿಯಲು ತಂದಿದ್ದ ಗರಗಸ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ನಗರ ಜಿಲ್ಲಾಧಿಕಾರಿ ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಗಂಧದ ಮರ ಕಳವಿಗೆ ಯತ್ನಿಸಿರುವುದು ಕಂಡುಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಮರಗಳ್ಳರು ಕಾಡಿನ ಒಳಗೆ ಆಯುಧಗಳನ್ನು ತಂದಿದ್ದಾರೆ. ಗಂಧದ ತುಂಡುಗಳೂ ಸಿಕ್ಕಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ದಯಾನಂದ್ ತಿಳಿಸಿದರು.
ಗುಟ್ಖಾ ಪ್ಯಾಕೆಟ್‌ನಿಂದ ಸುಳಿವು:
ಕಳೆದೆರಡು ತಿಂಗಳಿಂದ ಗಂಧದ ಮರಗಳ ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಕಳ್ಳರ ಬೆನ್ನುಬಿದ್ದ ಸಿಬ್ಬಂದಿಗೆ ಅರಣ್ಯ ಪ್ರದೇಶದ ಕೆಲವು ಕಡೆಗಳಲ್ಲಿ ಗುಟ್ಖಾ ಪ್ಯಾಕೆಟ್‌ಗಳು ಕಂಡುಬಂದಿದ್ದವು. ಗುಟ್ಖಾ ಪ್ಯಾಕೆಟ್‌ಗಳ ಜಾಡು ಹಿಡಿದು ಹೊರಟ ಸಿಬ್ಬಂದಿಗೆ ಮರಗಳ್ಳರ ಸುಳಿವು ಸಿಕ್ಕಿತ್ತು ಎನ್ನಲಾಗಿದೆ.