ವಿಜಯವಾಣಿ ಸುದ್ದಿಜಾಲ ಆನೇಕಲ್
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೋಚನಾ ಚಳವಳಿ ಸಂಘಟನೆಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರಾಜೀವ್‌ಗೆ ಮನವಿ ಸಲ್ಲಿಸಲಾಯಿತು.
ಪ್ರಜಾ ವಿಮೋಚನಾ ಸಂಘಟನೆಯ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಭೂಮಿ ಮತ್ತು ಇನಾಮ್ ಮಂಜೂರು ಭೂಮಿಯನ್ನು ಪರಭಾರೆ ಮಾಡದಂತೆ ತಡೆಯಲು ಕಾನೂನು ರೂಪಿಸಲಾಗಿತ್ತು. ಆದರೆ ಹಲವು ಪ್ರಕರಣಗಳಲ್ಲಿ ಈ ವರ್ಗಗಳ ಜನರ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜಮೀನುಗಳನ್ನು ಉಳಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪಿಟಿಎಲ್ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಅಧಿಕಾರಕ್ಕೆ ಬಂದು ಹಲವು ದಿನಗಳು ಕಳೆದರೂ ತಿದ್ದುಪಡಿ ತರುವ ಬಗ್ಗೆ ಕ್ರಮ ಕೈಗೊಂಡಿಲ್ಲ. ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ತಾಲೂಕಿನಲ್ಲಿ ಸಾವಿರಾರು ಮಂದಿ ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ. ಇವರಿಗೆ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಮತ್ತು ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಆನೇಕಲ್ ತಾಲೂಕಿನಲ್ಲಿ 5ಕೈಗಾರಿಕ ಪ್ರದೇಶಗಳಿದ್ದು, ಈ ಭಾಗದ ಸ್ಥಳೀಯರಿಗೆ ಪ್ರತಿ ವರ್ಷ ಕನಿಷ್ಠ 10 ಸಾವಿರ ಮಂದಿಗೆ ಉದ್ಯೋಗ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಸುಲಭವಾಗಿ ಆಗಬೇಕು ಮತ್ತು ಮಧ್ಯವರ್ತಿಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.