ವಿಜಯವಾಣಿ ಸುದ್ದಿಜಾಲ ಆನೇಕಲ್
ಮಂಚನಹಳ್ಳಿಯಲ್ಲಿ ಊರಹಬ್ಬದ ಪ್ರಯುಕ್ತ ಜೋಡಿ ಕರಗ ಮಹೋತ್ಸವ ವಿಜೃಂಬಣೆಯಿಂದ ನೆರವೇರಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಜನ ಜೋಡಿ ಕರಗಕ್ಕೆ ಸಾಕ್ಷಿಯಾದರು.
ರಾತ್ರಿ 12ರ ಸುಮಾರಿಗೆ ಜೋಡಿ ಕರಗ ದೇವಾಲಯದಿಂದ ಹೊರಬಂದಿತ್ತು. ವೀರಕುಮಾರರು ಅಲಗು ಸೇವೆ ಮಾಡಿ, ಕರಗ ಬರಮಾಡಿಕೊಂಡರು.
ಗ್ರಾಮದ ವಿವಿಧ ಬೀದಿಗಳಲ್ಲಿ ವಾದ್ಯದ ವಾದನಕ್ಕೆ ನರ್ತನ ಮಾಡುತ್ತಾ ಕರಗವು ಸಂಚರಿಸಿತು. ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಪಲ್ಲಕ್ಕಿಗಳ ಮುಂದೆ ಕರಗವು ನೃತ್ಯ ಮಾಡಿತ್ತು.
ಮೇ 8ರಂದು ಕಂಬದ ರಾಯನ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು, ಜೋಡಿ ಕರಗ ಮಹೋತ್ಸವದೊಂದಿಗೆ ಮುಕ್ತಾಯವಾದವು.
ಮಾರಮ್ಮ ದೇವಿ, ಮುತ್ಯಾಲಮ್ಮ ದೇವಿ, ಸೊಪ್ಪಳ್ಳಿ ಯಲ್ಲಮ್ಮ ದೇವಿ, ಲಘುಮಮ್ಮ, ಸಫಲಮ್ಮ ದೇವಿ, ಕರಗದಮ್ಮ ದೇವಿ ಪಲ್ಲಕ್ಕಿಗಳ ಉತ್ಸವ ಗ್ರಾಮದಲ್ಲಿ ನಡೆಯಿತು.
ಊರಹಬ್ಬದ ಅಂಗವಾಗಿ ಲಘುಮಮ್ಮ ದೇವಿ ತಂಡದಿಂದ ಕಾಲಾಟ ಮತ್ತು ಕೀಲು ಕುದುರೆ ಕುಣಿತ ಸೇರಿ ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು. ವೀರಗಾಸೆ, ನಂದಿಧ್ವಜ ಕುಣಿತ ನಡೆಯಿತು.