anekal jantadarshana 
ಜಿಲ್ಲೆ

ಆನೇಕಲ್‌ನಲ್ಲಿ ಮಳೆ ನಡುವೆ ಅಹವಾಲು ಸ್ವೀಕಾರ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ನಮ್ಮನ್ನು ಭೇಟಿಯಾಗಲು ಸಾಧ್ಯವಾಗದವರ ಬಳಿ ನಾವೇ ತೆರಳಿ ಜನರ ಅಹವಾಲು ಆಲಿಸಿ ಅಧಿಕಾರಿಗಳ ಮೂಲಕ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ಪ್ರಯತ್ನವೇ ಜನತಾದರ್ಶನ ಎಂದು ಡಿಸಿಎಂ ಹಾಗೂ ನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಮಾರ್ ಹೇಳಿದರು.
ಪಟ್ಟಣದಲ್ಲಿ ಜನತಾದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಜತೆ ಜನಪ್ರತಿನಿಧಿಗಳು ನೇರವಾಗಿ ಜನರ ಬಳಿ ಹೋಗುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ. ತಾಲೂಕಿಗೆ ಕಾವೇರಿ ನೀರು, ಮಿನಿವಿಧಾನಸೌಧ ಸೇರಿ ಶಾಸಕರು ಕೆಲವೊಂದು ಬೇಡಿಕೆ ಇಟ್ಟಿದ್ದಾರೆ ಈಗಾಗಲೇ ಅಧಿಕಾರಿಗಳ ಜತೆ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದೇನೆ. ಜನರ ಬಳಿ ಅಧಿಕಾರಿಗಳನ್ನು ಕರೆತಂದು ಅಹವಾಲು ಆಲಿಸಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಇತರೆ ಕಡೆ ಆಯೋಜನೆ ಮಾಡಲಾಗುವುದು ಎಂದರು.

ಡಿಸಿಎಂ ಕನಸು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ, ಡಿಸಿಎಂ ಹಲವಾರು ಕನಸುಗಳನ್ನು ಇಟ್ಟು ಬೆಂಗಳೂರಿನ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮುಖಂಡರಾದ ಕೆ.ಸಿ ರಾಮಚಂದ್ರ, ಅಚ್ಯುತ್ ರಾಜು, ಪಧ್ಮನಾಭ್, ಯಲ್ಲಪ್ಪ, ಬೊಮ್ಮಸಂದ್ರ ಲಿಂಗಣ್ಣ, ನಾಗವೇಣಿ, ರಾಜೇಂದ್ರ ಪ್ರಸಾದ್ ಬಾಬು, ಮನಿವೀರಪ್ಪ, ಹರೀಶ್ ಗೌಡ, ಆರ್.ಕೆ ರಮೇಶ್, ರಾಮೋಜಿ ಗೌಡ ಮತ್ತಿತರರು ಇದ್ದರು.

ಸಮಸ್ಯೆಗೆ ದನಿಯಾಗುವ ಕಾರ್ಯಕ್ರಮ: ಶಾಸಕ ಬಿ.ಶಿವಣ್ಣ ಮಾತನಾಡಿ, ಜನರ ಸಮಸ್ಯೆಗೆ ದನಿಯಾಗುವ ಕಾರ್ಯಕ್ರಮ ಇದಾಗಿದೆ ಎಂದರು. ಮೆಟ್ರೋ ಕಾಮಗಾರಿಯನ್ನು ಬೊಮ್ಮಸಂದ್ರದಿಂದ ಆನೇಕಲ್ ಹಾಗೂ ಅತ್ತಿಬೆಲೆಗೆ ವಿಸ್ತರಿಸಲು ಎರಡು ಸುತ್ತಿನ ಸಭೆ ಆಗಿದೆ, ಸರ್ಜಾಪುರ ಮತ್ತು ಅತ್ತಿಬೆಲೆ ಹೋಬಳಿ ಹಾಗೂ ಪಟ್ಟಣಕ್ಕೆ ಕಾವೇರಿ ನೀರು ಹರಿಸಬೇಕು ಎಂದು ಮನವಿ ಮಾಡಿದ್ದು,ಡಿ.ಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ ಎಂದರು.