ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸುಸಜ್ಜಿತವಾದ ಪಂಚಾಯಿತಿ ಕಟ್ಟಡದ ಅವಶ್ಯಕತೆ ಇದೆ ಎಂದು ಗ್ರಾಪಂ ಅಧ್ಯಕ್ಷೆ ಸಪ್ನಾ ಚೌಡಪ್ಪ ಹೇಳಿದರು.
ತಾಲೂಕಿನ ಬನ್ನೇರುಘಟ್ಟ ಗ್ರಾಪಂ ಆವರಣದಲ್ಲಿ ನೂತನ cಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಒಂದು ಕೋಟಿ ರೂ. ಮೊತ್ತದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ನೀಲಿ ನಕ್ಷೆ ರೂಪಿಸಲಾಗಿದೆ. ಪಂಚಾಯಿತಿ ಕಾರ್ಯಾಲಯ ಚಿಕ್ಕದಾಗಿದ್ದು, ಸಭೆ, ಸಮಾರಂಭ ನಡೆಸಲು ಸಭಾಂಗಣ ಇಲ್ಲದೆ, ಸಾಕಷ್ಟು ತೊಂದರೆ ಎದುರಾಗಿತ್ತು. ಆದ್ದರಿಂದ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಗ್ರಾಪಂ ಕಟ್ಟಡ ಕಾಮಗಾರಿಗೆ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ 25 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ಆಧುನಿಕ ರೀತಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ದಾನಿಗಳಿಂದಲೂ ಸಹಕಾರ ಕೋರಲಾಗಿದೆ ಎಂದರು.
ಬನ್ನೇರುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ 14 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಲು ಕಟ್ಟಡ ಅತ್ಯವಶ್ಯಕವಾಗಿದೆ. ಕಾರ್ಮಿಕರು ಹಾಗೂ ಹೊರ ರಾಜ್ಯದ ಜನ ಹೆಚ್ಚಾಗಿ ವಾಸ ಮಾಡುತ್ತಿರುವುದರಿಂದ ದಾಖಲೆಗಳಿಗಾಗಿ ಪಂಚಾಯಿತಿಗೆ ಜನ ಹೆಚ್ಚಾಗಿ ಬರುತ್ತಿದ್ದಾರೆ ಎಂದರು.
ಗ್ರಾಪಂ ಉಪಾಧ್ಯಕ್ಷ ಪಿ.ಮಾದೇಶ್ ಮಾತನಾಡಿ, ಈ ಭಾಗದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಕೆಲಸಗಳು ಸುಲಭವಾಗಿ ಆಗಬೇಕಾದರೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಚೇರಿಯಲ್ಲಿ ಸರಿಯಾದ ಜಾಗದ ಅವಶ್ಯಕತೆ ಇರುವುದರಿಂದ ಹೊಸ ಕಟ್ಟಡ ನಿರ್ಮಾಣ ಆದರೆ, ಇದರಿಂದ ಸಮಸ್ಯೆ ಬಗೆಹರಿಯುವುದು ಎಂದರು.