ಪಡುಬಿದ್ರಿ: ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವದ 14ನೇ ವರ್ಧಂತ್ಯುತ್ಸವ ಜೂನ್ 1, 2ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ತಿಳಿಸಿದರು.
ಪಟ್ಟಾಭಿಷೇಕ ವರ್ಧಂತಿ ಉತ್ಸವ ಅಂಗವಾಗಿ ಜೂನ್ 1ರಂದು ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆಗಳ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಸಾಧಕರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ, ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಲಿದೆ ಎಂದು ಬುಧವಾರ ಕಾಪುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ಅಯೋಧ್ಯಾ ರಾಮಮಂದಿರದ ವಾಸ್ತು ಶಿಲ್ಪಿ ಚಂದ್ರಾಕಾಂತ ಸೋಂಪುರ್ ಅಹಮದಾಬಾದ್‌ಗೆ ವಾಸ್ತು ಪಿತಾಮಹನ್ ಸರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರು ಅವರಿಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿತಂಮ ರಾಷ್ಟ್ರೀಯ ಪ್ರಶಸ್ತಿ ಮೊದಲ ಬಾರಿಗೆ ಸಂಸ್ಥಾನದ ಮೂಲಕ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಆಚಾರ್ ಕಂಬಾರು ಹೇಳಿದರು.
ರಥಶಿಲ್ಪಿ ಸುದರ್ಶನ ಆಚಾರ್ಯ ಉಡುಪಿ, ಚಿತ್ರ ಕಲಾವಿದ ವೈ.ಎನ್.ತಾರಾನಾಥ ಆಚಾರ್ಯ ಮಂಗಳೂರು ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ ಹಾಗೂ ಯುವ ಶಿಲ್ಪಿಗಳಾದ ಚಿದಾನಂದ ಆಚಾರ್ಯ ವಿಟ್ಲ, ಕೆ.ಎಸ್.ಸುಮಂತ್ ಆಚಾರ್ಯ ಪುತ್ತೂರು, ಜಯಚಂದ್ರ ಆಚಾರ್ಯ ನಾಳ, ಡಿ.ಕೆ.ಕವಿತಾ, ವೈಭವ್ ಅಶೋಕ್ ಮಡಕೈಕರ್ ಕಾರವಾರ ಅವರಿಗೆ ಅಭಿನಂದನೆ ನಡೆಯಲಿದೆ. ವಿವಿಧ ಪುಸ್ತಕಗಳ ಲೋಕಾರ್ಪಣೆ, ಛಾಯಾಚಿತ್ರ ಪ್ರದರ್ಶನ, ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದ್ದು, ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರತಿಷ್ಠಾನದ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ತ್ರಾಸಿ ಸುಧಾಕರ ಆಚಾರ್ಯ, ಮಾಧ್ಯಮ ವಿಭಾಗ ಸಂಚಾಲಕ ವೈ.ಧರ್ಮೇಂದ್ರ ಆಚಾರ್ಯ, ಸಹ ಸಂಚಾಲಕ ರತ್ನಾಕರ ಆಚಾರ್ಯ ಉದ್ಯಾವರ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ಪ್ರಮುಖರಾದ ದಯಾನಂದ ಆಚಾರ್ಯ ತೆಂಕನಿಡಿಯೂರು, ರಮಾ ನವೀನ್ ಕಾರ್ಕಳ, ದೀಪಾ ಸುರೇಶ್ ಕಟಪಾಡಿ ಉಪಸ್ಥಿತರಿದ್ದರು.
ಜೂನ್ 2ರಂದು ವಿಶ್ವಕರ್ಮ ಸಾಂಸ್ಕೃತಿಕ ಪರಂಪರೆಯ ನಿರ್ಮಾತೃ, ಇತಿಹಾಸದ ಪುನರಾವಲೋಕನ ಭವಿಷ್ಯದ ಅನಾವರಣ ವಿಷಯಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ, ಮಣಿಪುರ ಗುಜರಾತ್, ಪಂಜಾಬ್ ಹಾಗೂ ರಾಜಸ್ಥಾನ ಮೊದಲಾದ ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮೂಡುಬಿದಿರೆ ಎಸ್‌ಕೆಎಫ್ ಎಲಿಕ್ಸರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ರಾಮಕೃಷ್ಣ ಆಚಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಲ್ಪಾಚಾರ್ಯ ಯು.ಕೆ.ಉಮಾಪತಿ ಆಚಾರ್ಯ ಕುಂಭಕೋಣಂ ಸಮಾರೋಪ ಭಾಷಣ ಮಾಡಲಿದ್ದಾರೆ.