ಜಿಲ್ಲೆ

ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಸಿ

ಅರಕಲಗೂಡು: ರೈತರು ಹಾಗೂ ಜಮೀನಿನ ಮೇಲೆ ದಾಳಿ ನಡೆಸುವ ಕಾಡಾನೆಗಳನ್ನು ನಿಯಂತ್ರಿಸಲು ರೆಡಿಯೋ ಕಾಲರ್ ಅಳವಡಿಸುವಂತೆ ಸಂಸದ ಶ್ರೇಯಸ್ ಪಟೇಲ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಇಲಾಖಾವಾರು ಪ್ರಗತಿ ಪರಿಶೀಲಿಸಿ ಮಾತನಾಡಿದರು.

ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದ ಆಗಿರುವ ಹಾನಿ ಕುರಿತು ಅರಣ್ಯಾಧಿಕಾರಿ ಶಂಕರ್ ಅವರಿಂದ ಮಾಹಿತಿ ಪಡೆದರು. ಮಲ್ಲಿಪಟ್ಟಣ ಮತ್ತು ಕೊಣನೂರು ಹೋಬಳಿಯಲ್ಲಿ ಕೊಡಗಿನ ಗಡಿ ಭಾಗದಿಂದ ಬಂದ ಕಾಡಾನೆಗಳು ದಾಳಿ ನಡೆಸುತ್ತಿವೆ. ರೈತರ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ. ಬೆಳೆ ಹಾನಿ ಕುರಿತು ರೈತರಿಂದ ಮನವಿ ಸ್ವೀಕರಿಸಲಾಗಿದೆ. ರೈತರಿಗೆ 12 ಲಕ್ಷ ರೂ. ಬೆಳೆ ಹಾನಿ ಪರಿಹಾರ ನೀಡಬೇಕಿದ್ದು ಈ ಪೈಕಿ 2.5 ಲಕ್ಷ ಪರಿಹಾರ ಒದಗಿಸಲಾಗಿದೆ ಎಂದು ಶಂಕರ್ ಮಾಹಿತಿ ನೀಡಿದರು.

ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಪ್ರಗತಿ ಕುರಿತು ಜೆಜೆಎಂ ಸಹಾಯಕ ಇಂಜಿನಿಯರ್ ನವೀನ್ ಅವರಿಂದ ಮಾಹಿತಿ ಪಡೆದರು. ತಾಲೂಕಿನಲ್ಲಿ ಯೋಜನೆ ಪ್ರಗತಿಯಲ್ಲಿದ್ದು, ಕಸಬಾ ಹೋಬಳಿಯ ಬೈಚನಹಳ್ಳಿ, ಹೆಬ್ಬಾಲೆ, ವಡ್ಡರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ತಡವಾಗುತ್ತಿದೆ ಎಂದು ಇಂಜಿನಿಯರ್ ನವೀನ್ ಸಭೆಗೆ ತಿಳಿಸಿದರು.

ಗುತ್ತಿಗೆದಾರರ ಮೇಲೆ ಒತ್ತಡ ತಂದು ಎಲ್ಲಾ ಕಡೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಇದು ಉತ್ತಮ ಯೋಜನೆಯಾಗಿದ್ದು ಕಾಮಗಾರಿಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಸಂಸದರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕೊಠಡಿಗಳ ಕೊರತೆ ಕುರಿತು ಬಿಇಒ ನಾರಾಯಣ್ ಹಾಗೂ ಸಿಡಿಪಿಒ ವೆಂಕಟೇಶ್ ಅವರಿಂದ ಮಾಹಿತಿ ಪಡೆದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಕ್ರಮ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಪೊಲೀಸರು ನಿಗಾ ವಹಿಸಬೇಕು ಎಂದರು. ವಲಸೆ ಕಾರ್ಮಿಕರ ಕುರಿತು ಸೂಕ್ತ ಮಾಹಿತಿ ಸಿಗುತ್ತಿಲ್ಲ ಎಂದು ಸಬ್ ಇನ್‌ಸ್ಪೆಕ್ಟರ್ ಕಾವ್ಯ ಸಭೆಗೆ ತಿಳಿಸಿದರು.

ವಲಸೆ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಮಾಲೀಕರ ಸಭೆ ಕರೆದು ಸೂಕ್ತ ಮಾಹಿತಿ ಒದಗಿಸುವಂತೆ ಹಾಗೂ ಮುಂದಾಗುವ ಅನಾಹುತಕ್ಕೆ ಅವರನ್ನೇ ಹೊಣೆ ಮಾಡುವ ಕುರಿತು ಎಚ್ಚರಿಕೆ ನೀಡುವಂತೆ ಸೂಚನೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಮಾತನಾಡಿ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿಲ್ಲ. ಎರಡರಿಂದ ಐದು ಕೆಜಿ ಅಕ್ಕಿ ಕಡಿಮೆ ವಿತರಿಸುತ್ತಿರುವ ಕುರಿತು ಸಾಕಷ್ಟು ದೂರುಗಳಿಗೆ. ಅಂತಹ ನ್ಯಾಯ ಬೆಲೆ ಅಂಗಡಿಗಳನ್ನು ಗುರುತಿಸಿ ಪರವಾನಿಗೆ ರದ್ದು ಪಡಿಸಬೇಕು ಎಂದರು.

ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಸಂಸದರು ಸೂಚಿಸಿದರು.

ಪ.ಪಂ. ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ ಷರೀಫ್, ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಪಂ ಇಒ ಪ್ರಕಾಶ್, ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ ಇತರರಿದ್ದರು.

ಆಸ್ಪತ್ರೆಗೆ ಭೇಟಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ಘಟಕ ಪರಿಶೀಲಿಸಿದರು. ರೋಗಿಗಳ ಆರೋಗ್ಯ ವಿಚಾರಿಸಿದರು. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ ದರ್ಜೆ ನೌಕರರು ಆಸ್ಪತ್ರೆಗೆ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ದೂರುಗಳಿವೆ. ಇಂತವರ ಬಗ್ಗೆ ನಿಗಾ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸಾತ್ಮಕ ಸೌಲಭ್ಯಗಳು ದೊರೆಯುವಂತೆ ಕ್ರಮ ವಹಿಸಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ದೀಪಕ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಅವರಿಗೆ ಸೂಚನೆ ನೀಡಿದರು.

ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಮನವಿ: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.

ಅಂಬೇಡ್ಕರ್ ಭನದ ಕಾಮಗಾರಿ ಅಪೂರ್ಣಗೊಂಡಿರುವ ಕುರಿತು ಸಮುದಾಯದ ಮುಖಂಡರ ಮನವಿ ಆಲಿಸಿದ ಬಳಿಕ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ನಾನು ಜಿಪಂ ಸದಸ್ಯನಾಗಿದ್ದ ಕಾಲದಿಂದಲೂ ಭವನದ ಕಾಮಗಾರಿ ಮುಗಿಯದೆ ಕುಂಟುತ್ತಿದೆ. ಭವನದ ಕಾಮಗಾರಿ ಪೂರ್ಣವಾಗದ ಬಗ್ಗೆ ಬೇಸರವಿದೆ. ಭವನದ ಕಾಮಗಾರಿಗಾಗಿ 3 ಕೋಟಿ ರೂ. ಅನುದಾನ ಒದಗಿಸುವಂತೆ ಜಿಪಂ ಇಂಜಿನಿಯರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಭವನದ ಕಾಮಗಾರಿಗೆ ಅನುದಾನ ಕೊಡಿಸುವುದಾಗಿ ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಮಾತನಾಡಿ, ದಶಕಗಳಿಂದಲೂ ಅಂಬೇಡ್ಕರ್ ಭವನದ ಕಾಮಗಾರಿ ಮುಗಿಯದಿರುವುದು ದುರಾದೃಷ್ಟಕರ, ಇದರಿಂದ ಬಡ ವರ್ಗದ ಜನರು ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಕೈಗೊಳ್ಳಲು ತೊಂದರೆಯಾಗಿದೆ. ಭವನ ಇಲ್ಲದೆ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ದುಬಾರಿ ಬಾಡಿಗೆ ತೆರುವಂತಾಗಿದೆೆ ಎಂದರು.