ಜಿಲ್ಲೆ

ಬೊಂಬೆನಾಡು ಚನ್ನಪಟ್ಟಣದಲ್ಲಿ ಐದು ಕಾಡಾನೆಗಳ ಉಪಟಳ ; ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ನಾಶ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ : ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಎರಡು ಪುಂಡಾನೆಗಳು ಸೆರೆಯಾದವು ಎಂದು ನಿಟ್ಟುಸಿರು ಬಿಡುವಾಗಲೇ ಬೊಂಬೆನಾಡು ಚನ್ನಪಟ್ಟಣದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ.

ತಾಲೂಕಿನ ಚಿಕ್ಕವಿಠ್ಠಲೇನಹಳ್ಳಿಯಲ್ಲಿ ಶನಿವಾರ ರಾತ್ರಿ 5 ಕಾಡಾನೆಗಳು ರೈತರೊಬ್ಬರ ಜಮೀನಿಗೆ ನುಗ್ಗಿ ದಾಂಧಲೆ ನಡೆಸಿವೆ. ಇದರಿಂದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಸಂಪೂರ್ಣವಾಗಿ ನಾಶವಾಗಿದೆ.

ರೈತ ದೇವರಾಜು ಅವರು ಜಮೀನಿನಲ್ಲಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಸೌತೆಕಾಯಿ ಬೆಳೆದಿದ್ದರು. ಬೆಳೆ ಕಟಾವಿಗೆ ಬಂದಿದ್ದು, ಹೊಸವರ್ಷದ ಆರಂಭದಲ್ಲಿ ಆದಾಯ ನಿರೀಕ್ಷೆ ಮಾಡಿದ್ದರು. ಶನಿವಾರ ರಾತ್ರಿ ಪುಂಡಾನೆಗಳ ದಾಳಿಯಿಂದ ಸಲು ನಷ್ಟವಾಗಿ, ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ: ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಮಲ್ಲೇಶ್ ವಿರುದ್ಧ ಚಿಕ್ಕವಿಠ್ಠಲೇನಹಳ್ಳಿ ಸೇರಿ ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದೆ. ಇದನ್ನು ತಡೆಗಟ್ಟಲು ಇಲಾಖೆ ವಿಫಲಗೊಂಡಿದೆ. ಬೆಳೆ ಈ ರೀತಿ ನಾಶವಾದರೆ ಬದುಕಿನ ಗತಿಯೇನು?, ನೀವು ಕೊಡುವ ಅರೆಕಾಸಿನ ಪರಿಹಾರ ಯಾವುದಕ್ಕೂ ಸಾಲದು. ರಾತ್ರಿ ವೇಳೆ ರಸ್ತೆಯಲ್ಲಿಯೇ ಕಾಡಾನೆಗಳು ನಿಲ್ಲುತ್ತವೆ. ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ನಮ್ಮ ಅಹವಾಲು ಅಲಿಸಬೇಕು ಎಂದು ಪಟ್ಟು ಹಿಡಿದರು.

ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲ ವಲಯ ಅಧಿಕಾರಿಗಳೊಂದಿಗೆ ಜಮೀನಿನ ಬಳಿಯೇ ಸಮಸ್ಯೆಗಳ ಕುರಿತು ವಾಗ್ವಾದ ನಡೆಯಿತು. ಬಳಿಕ, ಸ್ಥಳಕ್ಕೆ ಎಸಿಎಫ್ ಪುಟ್ಟಮ್ಮ ಭೇಟಿ ನೀಡಿದಾಗಲೂ ರೈತರ ಆಕ್ರೋಶ ಮುಂದುವರಿಯಿತು. ಈ ವೇಳೆ ರೈತರನ್ನು ಮನವೊಲಿಸಿದ ಅಧಿಕಾರಿಗಳು, ಕಾಡಾನೆಗಳ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮಕೈಗೊಂಡಿದ್ದೇವೆ. ಬೆಳೆನಾಶಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ರೈತನ ಅಳಲು  ; ಲಕ್ಷಾಂತರ ರೂ.ಬಂಡವಾಳ ಹಾಕಿ ಬೆಳೆ ಬೆಳೆದಿದ್ದೆ. ವರ್ಷದ ಆರಂಭದಲ್ಲಿ ಕಟಾವು ಮಾಡಬೇಕಾಗಿತ್ತು. ಆದರೆ, ಕಾಡಾನೆಗಳು ಇಡೀ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಬಂಡವಾಳ ಹಾಗೂ ಶ್ರಮ ಎಲ್ಲವೂ ನೀರಿನಲ್ಲಿ ವ್ಯರ್ಥವಾಗಿದೆ. ಕಾಡಾನೆ ದಾಳಿ ತಡೆಗಟ್ಟಲು ಅರಣ್ಯ ಇಲಾಖೆ ಹಾಗೂ ಸರ್ಕಾರ ವಿಫಲಗೊಂಡಿವೆ. ಸರ್ಕಾರವೇ ಪೂರ್ಣ ಪರಿಹಾರ ಕೊಡಬೇಕು. ಇಲ್ಲವಾದರೆ, ವಿಷ ಕುಡಿಯುತ್ತೇನೆ ಎಂದು ಅಳಲು ತೋಡಿಕೊಂಡರು.