ಬೀದರ್: ಇಲ್ಲಿನ ಮಹಮ್ಮದ್ ಗವಾನ್ ಮದರಸದಲ್ಲಿ ಉಂಟಾಗಿರುವ ಕೋಮು ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಇದೀಗ ಆಂದೋಲ ಶ್ರೀಗಳು ಮಧ್ಯಪ್ರವೇಶ ಮಾಡಿ, ಅಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮಹಮ್ಮದ್ ಗವಾನ್ ಮದರಸದಲ್ಲಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಂದೋಲ ಶ್ರೀಗಳು, ಮಹಮ್ಮದ್ ಗವಾನ್ ಮದರಸದ ಅರಳಿ ಗಿಡದ ಕೆಳಗೆ ಲಕ್ಷ್ಮೀ ಗುಡಿ ಇತ್ತು. ಪ್ರತಿವರ್ಷ ದಸರಾ ಸಂದರ್ಭದಲ್ಲಿ ಮೆರವಣಿಗೆ ಮೂಲಕ ಆಗಮಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ಆದರೆ ಕೆಲವು ಮುಸ್ಲಿಮರು ವಿಜಯದಶಮಿ ದಿನ ಯಾರೂ ಬರಬಾರದು ಎಂದು ಗೇಟ್ಗೆ ಕೀಲಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂಗಳು ಮದರಸಾಗೆ ಬರಬಾರದು ಎಂದು ಬೀಗ ಹಾಕಿ ನಮ್ಮ ಸಂಪ್ರದಾಯಕ್ಕೆ ಅಡ್ಡಿಪಡಿಸಿದ್ದಾರೆ. ಮಹಮ್ಮದ್ ಗವಾನ್ ಯೂನಿವರ್ಸಿಟಿ ಯಾವುದೇ ಸಮುದಾಯ-ಧರ್ಮಕ್ಕೆ ಸೀಮಿತವಲ್ಲ. ಭಾರತ ಪುರಾತತ್ವ ಇಲಾಖೆ ಅಧೀನಕ್ಕೊಳಪಟ್ಟಿರುವ ಯೂನಿವರ್ಸಿಟಿಯಲ್ಲಿ ಎಲ್ಲರಿಗೂ ಮುಕ್ತವಾದ ಪ್ರವೇಶ ಇದೆ. ಇತ್ತೀಚೆಗೆ ಕೆಲವರು ಅಲ್ಲಿ ನಮಾಜ್ ಮಾಡುವ ಮೂಲಕ ಮದರಸ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದೂಗಳಿಗೆ ಪ್ರವೇಶ ನೀಡದೆ ಅಡ್ಡಿಪಡಿಸಿದ್ದಾರೆ. ಅದಾಗ್ಯೂ ಹಿಂದೂಗಳು ಹೇಗೋ ಒಳಗೆ ಹೋಗಿ ಪೂಜೆ ಮಾಡಿದ್ದಾರೆ. ಆದರೆ ಪೊಲೀಸರು ತಮ್ಮ ಮೇಲಿನ ಒತ್ತಡದಿಂದ ಹಿಂದೂಗಳ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಬಾಗಿಲು ಒಡೆದಿದ್ದಾರೆ, ಬೀಗ ಒಡೆದಿದ್ದಾರೆ, ಗೋಡೆ ವಿರೂಪಗೊಳಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಕೇಸ್ ಹಾಕಿದ್ದಾರೆ ಎಂದು ಆಂದೋಲ ಶ್ರೀ ಆರೋಪಿಸಿದ್ದಾರೆ.
ಅಲ್ಲಿ ಹಿಂದೆ ಏನು ಸಂಪ್ರದಾಯವಿತ್ತೋ ಅದೇ ಮುಂದುವರಿಯಬೇಕು. ಅಲ್ಲಿ ನಮಾಜ್ಗೆ ಅವಕಾಶ ಇರಲಿಲ್ಲ, ಮದರಸಗೆ ಅವಕಾಶ ಇರಲಿಲ್ಲ. ಆದರೆ ಕೆಲವವರು ಅನಧಿಕೃತವಾಗಿ ಒಳಗೆ ನುಸುಳಿದ್ದಾರೆ, ಅವರನ್ನು ಹೊರಹಾಕಬೇಕು. ಜತೆಗೆ ಹಿಂದೂ ಸಮುದಾಯಕ್ಕೆ ಅಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಹಿಂದೂಗಳಿಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.