ಜಿಲ್ಲೆ

ಬಿಬಿಎಂಪಿಗೆ ಆಂಧ್ರ ಸಚಿವರ ನಿಯೋಗ ಭೇಟಿ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಆಂಧ್ರ ಪ್ರದೇಶದ ಪೌರಾಡಳಿತ ಸಚಿವ ಡಾ. ಪಿ. ನಾರಾಯಣ ನೇತೃತ್ವದ ಅಧಿಕಾರಿಗಳ ನಿಯೋಗವು ಶುಕ್ರವಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ (ಬಿಎಸ್‌ಡಬ್ಲುಎಂಎಲ್) ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ಈ ಸಂಸ್ಥೆಯೇ ಘನತ್ಯಾಜ್ಯ ನಿರ್ವಹಣೆಯನ್ನು ಪೂರ್ಣವಾಗಿ ಕೈಗೊಳ್ಳುತ್ತಿದೆ. ನಿತ್ಯ 6,500 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪ್ರತಿ ಮನೆ-ಮನೆಗೆ ತೆರಳಿ ಆಟೋ ಟಿಪ್ಪರ್‌ಗಳ ಮೂಲಕ ಹಸಿ, ಒಣ ಹಾಗೂ ನೈರ್ಮಲ್ಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಸಂಸ್ಕರಣೆ ಜತೆಗೆ ಕೆಲ ಸ್ಥಳದಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. ಬಿಡದಿ ಘಟಕದಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆಂಧ್ರ ಸಚಿವರಿಗೆ ಮಾಹಿತಿ ನೀಡಿದರು.

ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರು (ಬಲ್ಕ್ ಜನರೇಟರ್ಸ್‌) ಗಳಿಂದ ಪ್ರತ್ಯೇಕವಾಗಿ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿದೆ. ಕಟ್ಟಡ ಭಗ್ನಾವಶೇಷಗಳ (ಸಿ.ಡಿ. ವೇಸ್ಟ್) ಸಂಸ್ಕರಣೆಗೆ 2 ಘಟಕಗಳಿದ್ದು, ಇನ್ನೂ ನಾಲ್ಕು ಘಟಕಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ (ಸೇವಾ ಶುಲ್ಕ) ವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ಬಿಬಿಎಂಪಿಯಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.

ಈ ವೇಳೆ ನಿಗಮದ ಸಿಇಒ ಡಾ. ಕೆ.ಹರೀಶ್ ಕುಮಾರ್, ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಆಂಧ್ರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ. ಕಣ್ಣ ಬಾಬು, ಡಾ. ಪಿ.ಸಂಪತ್ ಕುಮಾರ್ ಇದ್ದರು.