ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ಅಧ್ಯಯನ ಪ್ರವಾಸಕ್ಕಾಗಿ ಆಗಮಿಸಿದ್ದ ಅಂಡಮಾನ್ ಮತ್ತು ನಿಕೋಬಾರ್ ರಾಜ್ಯದ ಸ್ಥಳೀಯ ಜನ ಪ್ರತಿನಿಧಿಗಳನ್ನು ಗ್ರಾಪಂ ವತಿಯಿಂದ ಗೌರವಿಸಲಾಯಿತು. ಪ್ರಭು, ನಾಗಮ್ಮ, ಶಿವಸ್ವಾಮಿ, ರೂಪಾರಾಣಿ, ಮಹದೇವಮ್ಮ, ಮಂಗಳಮ್ಮ, ಚಿನ್ನಮ್ಮ, ನಾಗೇಂದ್ರ, ಮಹದೇವಸ್ವಾಮಿ ಇತರರು ಇದ್ದರು. 
ಜಿಲ್ಲೆ

ರಾಗಿಬೊಮ್ಮನಹಳ್ಳಿ ಗ್ರಾಪಂಗೆ ಅಂಡಮಾನ್, ನಿಕೋಬಾರ್ ಜನಪ್ರತಿನಿಧಿಗಳ ಭೇಟಿ

ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರ ಆಡಳಿತ ರಾಜ್ಯದ ಸ್ಥಳೀಯ ಜನಪ್ರತಿನಿಧಿಗಳ ತಂಡ ಶುಕ್ರವಾರ ಭೇಟಿ ನೀಡಿ ಆಡಳಿತ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಅಂಡಮಾನ್ ಮತ್ತು ನಿಕೋಬಾರ್ ರಾಜ್ಯದ ಚುನಾಯಿತ ಪ್ರತಿನಿಧಿಗಳಾದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಅಲ್ಲಿನ ಆಯ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರ ತಂಡ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಆಗಮಿಸಿದ್ದರು.

ತರಬೇತಿ ಭಾಗವಾಗಿ ಆಯೋಜಿಸುವ ಅಧ್ಯಯನ ಪ್ರವಾಸದಲ್ಲಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡು ಆಗಮಿಸಿದ್ದ ಅಂಡಮಾನ್-ನಿಕೋಬಾರ್ ರಾಜ್ಯದ ಚುನಾಯಿತ 15 ಜನ ಪ್ರತಿನಿಧಿಗಳ ತಂಡ ಗ್ರಾಪಂಗೆ ಭೇಟಿ ನೀಡಿತು.

ಗ್ರಾಪಂ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಆಡಳಿತ ವರ್ಗದ ಜತೆ ಪಂಚಾಯಿತಿ ಅಭಿವೃದ್ಧಿ ಹಾಗೂ ಕಾರ್ಯ ವೈಖರಿ, ಅನುದಾನ ಬಳಕೆ ವಿಚಾರ, ವಿನಿಮಿಯ ಮಾಡಿಕೊಳ್ಳುವ ಮೂಲಕ ಮಾಹಿತಿ ಪಡೆದುಕೊಂಡರು. ಗ್ರಾಪಂ ವತಿಯಿಂದ ಆಗಮಿಸಿದ್ದ ಎಲ್ಲ ಜನಪ್ರತಿನಿಧಿಗಳನ್ನೂ ಗೌರವಿಸಲಾಯಿತು. ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತೆರಳಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪುಟಾಣಿ ಮಕ್ಕಳ ಜತೆ ಮಾತನಾಡಿ ಸಂಭ್ರಮಿಸಿದರು.

ಗ್ರಾಪಂ ಅಧ್ಯಕ್ಷ ಪ್ರಭು, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಶಿವಸ್ವಾಮಿ, ರೂಪಾರಾಣಿ, ಮಹದೇವಮ್ಮ, ಮಂಗಳಮ್ಮ, ಚಿನ್ನಮ್ಮ, ತಾಪಂ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಪಿಡಿಒ ಹಿರಣ್ಣಯ್ಯ, ಕಾರ್ಯದರ್ಶಿ ಚಲುವರಾಜು, ಸಿಬ್ಬಂದಿ ಕಾಳೇಗೌಡ, ನಾಗೇಂದ್ರ, ಮಹದೇವಸ್ವಾಮಿ ಇತರರು ಇದ್ದರು.