ಜಿಲ್ಲೆ

ಅಂತೂ ಅಶೋಕೆಗೆ ಬಂತು ಸರ್ಕಾರಿ ಬಸ್

ಬಸವರಾಜ ವೀರಪ್ಪ ಗರಗ

ಗೋಕರ್ಣ: ಯಾವುದೇ ಊರಿನಲ್ಲಿ ಜನರ ಮಧ್ಯ ಒಗ್ಗಟ್ಟು ಇಲ್ಲದೆ ಭೇದಭಾವ ಹೆಚ್ಚಿದ್ದಲ್ಲಿ ಸಾಮಾಜಿಕ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗುತ್ತದೆ. ಅದೇ ಗ್ರಾಮಾಂತರದ ಜನರು ಏಕತ್ರವಾಗಿ ಪ್ರಯತ್ನ ಮಾಡಿದರೆ ಎಂತಹದ್ದೇ ಕಠಿಣ ಕಾರ್ಯ ಸಫಲವಾಗುತ್ತದೆ ಎನ್ನುವುದಕ್ಕೆ ಗೋಕರ್ಣ ಅಶೋಕೆಯ ಗ್ರಾಮಸ್ಥರು ಸಾರ್ವಕಾಲಿಕ ಉದಾಹರಣೆಯಾಗಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇಲ್ಲಿನ ಗುಡ್ಡಗಾಡು ಪ್ರದೇಶ ಅಶೋಕೆಗೆ ಶುಕ್ರವಾರದಿಂದ ಪ್ರಥಮವಾಗಿ ಪ್ರಾರಂಭಿಸಲಾದ ಸರ್ಕಾರಿ ಬಸ್ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಅನೇಕ ಮಹಿಳೆಯರು ಎರಡು ವಾರ ಹಿಂದೆ ನಮ್ಮ ಮನೆಗೆ ಬಂದು ಬಸ್ ಪ್ರಾರಂಭಿಸುವಂತೆ ಅಲ್ಲಿನ ನೂರಾರು ಕುಟುಂಬದ ವತಿಯಿಂದ ಮನವಿ ಸಲ್ಲಿಸಿದ್ದರು. ಅದರ ಮರು ದಿನವೇ ಖುದ್ದಾಗಿ ಬಂದು ಬಸ್ ಅನ್ನು ಪ್ರಾಯೋಗಿಕವಾಗಿ ಓಡಿಸಿ ಆಗಬೇಕಾದ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು.

ಇಲ್ಲಿನ ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಶಾರದಾ ಮೂಡಂಗಿ, ತದಡಿಯ ರವಿ ಎಂ. ನಾಯ್ಕ, ಮೋಹನ ಮೂಡಂಗಿ ಮತ್ತಿತರ ಅನೇಕ ಸದಸ್ಯರ ಸಹಕಾರದಲ್ಲಿ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಡಲಾಯಿತು. ಬಸ್ ತಿರುಗಿಸಲು ಗ್ರಾಮದ ಬೀರಾ ಗೌಡ ಮತ್ತು ಬಲೀಂದ್ರ ಗೌಡ ತಮ್ಮ ಸ್ವಂತದ ಜಾಗ ಬಿಟ್ಟುಕೊಟ್ಟು ಗ್ರಾಮದಲ್ಲಿ ಗಾಡಿ ಓಡಾಡಲು ಕಾರಣರಾಗಿದ್ದು ಅವರಿಗೆ ಎಷ್ಟು ಅಭಿನಂದನೆಯಿತ್ತರು ಅದು ಕಡಿಮೆಯಾಗಿದೆ.

ಇವರೆಲ್ಲರ ಶ್ರಮದ ಫಲವಾಗಿ ಗ್ರಾಮದವರಿಗೆ, ವಿಶೇಷವಾಗಿ ನಿತ್ಯ ಶಾಲೆಗೆ ಹೋಗುವ ನೂರಾರು ಎಳೆಯ ಮಕ್ಕಳಿಗೆ ಮೂರು ಕಿಮೀ ದೂರದ ತದಡಿ-ಬೇಲೆಕಾನಿಗೆ ನಡೆದು ಹೋಗಿ ಬಸ್ ಹಿಡಿಯಬೇಕಾದ ಬವಣೆ ಶಾಶ್ವತವಾಗಿ ದೂರಾದಂತಾಗಿದೆ. ಗ್ರಾಮಸ್ಥರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಕುಮಟಾ ಘಟಕ ವ್ಯವಸ್ಥಾಪಕ ವಿನಾಯಕ ದೇಶಭಂಡಾರಿ ಮತ್ತಿತರ ಇಲಾಖಾ ಪ್ರಮುಖರು ಅಭಿನಂದನಾರ್ಹರಾಗಿದ್ದಾರೆ. ಪ್ರತಿದಿನ ಸರದಿಯಂತೆ ಗೋಕರ್ಣದಿಂದ ತದಡಿ-ಬೇಲೇಕಾನು ಮೂಲಕ ಅಶೋಕೆಗೆ ಬಂದು ಹೋಗುವ ಈ ಬಸ್ ಪ್ರಯೋಜನವನ್ನು ಗ್ರಾಮಸ್ಥರು ಪಡೆಯಬೇಕು ಎಂದು ಶಾಸಕರು ವಿನಂತಿಸಿದರು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಪೊಲೀಸ್ ಇನಸ್ಪೆಕ್ಟರ್ ಶ್ರೀಧರ ಎಸ್.ಆರ್., ಪಿಎಸ್​ಐ ಖಾದರ್ ಬಾಷಾ, ಡಿಪೋ ಮ್ಯಾನೇಜರ್ ವಿನಾಯಕ ದೇಶಭಂಡಾರಿ, ಸ್ಥಳದಾನಿಗಳಾದ ಬೀರಾ ಗೌಡ, ಬಲೀಂದ್ರ ಗೌಡ, ಅರಸು ಗೌಡರಾದ ಮಹಾಬಲೇಶ್ವರ ಗೌಡ, ಗ್ರಾಪಂ ಪಿಡಿಒ ವೆಂಕಟ್ರಮಣ ಪಟಗಾರ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಸದಸ್ಯರಾದ ಸಂದೇಶ ಗೌಡ, ಭಾರತಿ ದೇವತೆ, ಗಣಪತಿ ನಾಯ್ಕ, ಮಂಜುನಾಥ ಶೆಟ್ಟಿ, ಗಣೇಶ ಪಂಡಿತ ತದಡಿ, ಇತರರಿದ್ದರು.

ಗ್ರಾಮದ ಮಂಗಲಾ ರಮೇಶ ಗೌಡ ಮತ್ತು ನಾಗರತ್ನಾ ಬಾಲಚಂದ್ರ ಗೌಡ ಕಾರ್ಯಕ್ರಮ ನಿರ್ವಹಿಸಿದರು.