ಜಿಲ್ಲೆ

ನಾಗಮಂಗಲ ತಾಲೂಕಿನಲ್ಲಿ 185 ಪುರಾತನ ಶಾಸನ ಪತ್ತೆ: ಸಹಾಯಕ ಪ್ರಾಧ್ಯಾಪಕ ಆರ್.ಕಿರಣ್‌ಕುಮಾರ್ ಸಂಶೋಧನೆ

ನಾಗಮಂಗಲ: ದೇವಾಲಯಗಳ ನಾಡೆಂದು ಖ್ಯಾತಿ ಪಡೆದುಕೊಂಡಿರುವ ನಾಗಮಂಗಲ ತಾಲೂಕಿನಲ್ಲಿ ಪುರಾತನ ಕಾಲದ 185 ಶಾಸನ ಪತ್ತೆಯಾಗಿವೆ.

ಕೆ.ಆರ್.ಪೇಟೆಯ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಕಿರಣ್‌ಕುಮಾರ್ ಅವರು ಗಂಗರ ಕಾಲದ ನಾಲ್ಕು, ಹೊಯ್ಸಳರ ಕಾಲದ 46, ವಿಜಯನಗರ ಅರಸರ 19, ಮೈಸೂರು ದೊರೆಗಳ ಮೂರು ಹಾಗೂ ಇತರೆ 113 ಶಾಸನವನ್ನು ಪತ್ತೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಸ್ಮಾರಕ ಶಿಲ್ಪಗಳ ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕ ಡಾ.ಸಿ.ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಹಾಗೂ ಹಿರಿಯ ಸಂಶೋಧಕ ಮಹಮ್ಮದ್ ಕಲೀಮ್ ಉಲ್ಲಾ ಅವರಿಂದ ಮಾಹಿತಿ ಪಡೆದು ಸಂಶೋಧನೆ ಮಾಡಿದಾಗ ವೀರಗಲ್ಲು ಹಾಗೂ ಎರಡು ಇತರೆ ಶಾಸನಗಳು ದೊರೆತಿವೆ.

ಸಂತೆಬಾಚಹಳ್ಳಿ ಡಾ. ನಂಜುಂಡಸ್ವಾಮಿ ಅವರು ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಶಾಸನ ಓದಲು ಸಹಕರಿಸಿದ್ದಾರೆ. ಅಂತೆಯೇ ನಾಲ್ಕು ವೀರಗಲ್ಲು ಶಾಸನಗಳಲ್ಲಿ ಎರಡು ಗಂಗರು ಹಾಗೂ ಇನ್ನೆರಡು ಹೊಯ್ಸಳರ ಕಾಲಕ್ಕೆ ಸೇರಿದೆ ಎಂದು ತಿಳಿದುಬಂದಿದೆ. ಇತರೆ ಶಾಸನಗಳಲ್ಲಿ ಒಂದು ಹೊಯ್ಸಳರ ಕಾಲದ ತಮಿಳು ಧಾನ ಶಾಸನವಾಗಿದೆ. ಇನ್ನೊಂದು ವಿಜಯನಗರ ಕಾಲದ ಶಾಸನವಾಗಿದೆ. ಒಂದನೇ ವೀರಗಲ್ಲು ತಾಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿಯ ಸುರೇಶ ಎಂಬುವರ ಜಮೀನಿನಲ್ಲಿ ದೊರೆತ ಮೂರು ಹಂತದ ತುರುಗೋಳ್ ಶಾಸನವಾಗಿದೆ. ಇದು ಸುಮಾರು ಉದ್ದ 5.10 ಅಡಿ ಅಗಲ, ನಾಲ್ಕು ಅಡಿ ದಪ್ಪ ಇದೆ. ಶಾಸನದ ಸಾರವು 10ನೇ ಶತಮಾನದ ಗಂಗರ ಶಾಸನ ಸತ್ಯ ವಾಕ್ಯ(ರಾಚ ಮಲ್ಲ) ಆಳ್ವಿಕೆಕಾಲ(ಬಹುಶ: 974-985 ) ಮಾರ ಕುಡಿಯಣ್ಣನು ತುರುಗೋಳಿನಲ್ಲಿ ಕಾದಿ ತುರುಗಳು ಹಿಂದಿರುಗಿಸಿ ಸತ್ತಿದ್ದಾನೆ. ಲಿಪಿಯಲ್ಲಿ ಪಾ ಅತಿಶೆ ಬಾ ಅತಿಶೆ ಪದಗಳಿದ್ದು, ಇದರರ್ಥ ಯಾವುದು ಸ್ಥಳ ಇರಬಹುದು. ಅಂತೆಯೇ ಹತ್ತನೇ ಶತಮಾನದ ಗಂಗರ ಲಿಪಿ ಎಂದು ಹೇಳಬಹುದು.

ಇನ್ನೊಂದು ವೀರಗಲ್ಲು ಶಾಸನ ಹಾಲತಿ ಹೋಗುವ ದಾರಿಯ ರಸ್ತೆಯಲ್ಲಿ ಎಡಭಾಗದ ಗೌರಮ್ಮ ಎಂಬುವರ ಹೊಲದಲ್ಲಿ ದೊರೆತಿದೆ. ಸುಮಾರು ಉದ್ದ 4.8, ಅಗಲ 3.4, ದಪ್ಪ 18 ಸೆಂ.ಮೀ ಇದೆ. ಇದರ ಮೇಲ್ಚಾವಣಿ ಮರಿದುಹೋಗಿದೆ. ಇದು ಸಹ ಮೂರಂತದ ವೀರಗಲ್ಲು ಶಾಸನವಾಗಿದ್ದು, ಪ್ರಮುಖ ದಂಡನಾಯಕನ ವೀರಗಲ್ಲು ಶಾಸನ ಆಗಿಎ. ಲಿಪಿ ಮತ್ತು ವೀರಗಲ್ಲು ಲಕ್ಷಣಗಳ ಆಧಾರದ ಮೇಲೆ ಗಂಗರ ಕಾಲದ್ದೆಂದು ತಿಳಿದುಬಂದಿದೆ. ಇದರಲ್ಲಿ ಕೆಲವು ಅಕ್ಷರಗಳು ಮಾತ್ರ ಉಳಿದಿದ್ದು, ಕ್ರಿ.ಶ 10ನೇ ಶತಮಾನ ಎಂದು ಅಂದಾಜಿಸಬಹುದು.

ಕಾಡುಅಂಕನಹಳ್ಳಿಯಲ್ಲಿ ಸಾಲು ಶಾಸನ ಪತ್ತೆ

ಬೆಳ್ಳೂರು ಹೋಬಳಿ ಕಾಡು ಅಂಕನಹಳ್ಳಿಯಲ್ಲಿ ಮೂರನೇ ವೀರಗಲ್ಲು ಶಾಸನ ಪತ್ತೆಯಾಗಿದೆ. ಇದು ನಾಲ್ಕು ಸಾಲುಗಳ ಶಾಸನವಾಗಿದ್ದು, ಮೂರು ಹಂತದ ವೀರಗಲ್ಲಾಗಿದೆ. ಸುಮಾರು 5.2 ಅಡಿ ಉದ್ದ, 2.8 ಅಡಿ ಅಗಲ, 1 ಅಡಿ ದಪ್ಪ ಇದೆ. ಶಾಸನ ಪದ್ಯದ ರೂಪದಲ್ಲಿದ್ದು, ಬೀರಗಲ್ಲು ಎಂಬ ಪದ ಓದಲು ಮೇಲ್ನೋಟಕ್ಕೆ ಕಾಣುತ್ತದೆ. ಲಿಪಿ ಆಧಾರದ ಮೇಲೆ ಹೊಯ್ಸಳರ ಕಾಲದ ಶಾಸನವಾಗಿದ್ದು, ಪ್ರಮುಖ ದಂಡನಾಯಕನಿಗೆ ಸೇರಿದ್ದೆಂದು ಲಿಪಿಯಿಂದ ಹೇಳಬಹುದಾಗಿದೆ.

ಇದೇ ಊರಿನಲ್ಲಿ ಇನ್ನೊಂದು ಶಾಸನ ದೊರೆತಿದೆ. ಕಾಳಿಂಗನಹಳ್ಳಿಗೆ ಹೋಗುವ ರಸ್ತೆ ಎಡಭಾಗದಲ್ಲಿ ಪತ್ತೆಯಾಗಿದೆ. ಸುಮಾರು 3.8 ಅಡಿ ಉದ್ದ, 1.9 ಅಡಿ ಅಗಲ, 15 ಸೆಂ.ಮೀ ದಪ್ಪ ಇದೆ. ಇದರ ಪಕ್ಕದಲ್ಲಿ ಎರಡು ವೀರಗಲ್ಲುಗಳಿವೆ. ಲಿಪಿಯ ಆಧಾರದ ಮೇಲೆ ಹೊಯ್ಸಳರ ಕಾಲದ ವೈಷ್ಣವ ಧರ್ಮದ ತಮಿಳು ಭಾಷೆಯ ದಾರಾ ಶಾಸನವಾಗಿದೆ. ಶಾಸನದ ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಂಖ ಚಕ್ರ ಇದ್ದು ಹದಿನಾಲ್ಕು ಸಾಲುಗಳಿಂದ ಕೂಡಿದೆ. ಶಾಸನದ ಪಡಿ ಹೆಚ್ಚು ತೆಗೆಯಬೇಕಾಗಿರುವುದರಿಂದ ಸಂಪೂರ್ಣವಾಗಿ ಓದಬೇಕಿದೆ.

5ನೇ ಶಾಸನವೂ ಬೆಳ್ಳೂರು ಹೋಬಳಿ ಕತ್ರಿಗುಪ್ಪೆ ಗ್ರಾಮದ ವಿಜಯಲಕ್ಷ್ಮೀ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದೆ. ಇದು ವಿಜಯನಗರ ಕಾಲದ ಶಾಸನ ದೊರೆತಿದ್ದು, ಕಲ್ಲಿನ ಅರ್ಧ ಭಾಗ ಮಣ್ಣಿನಲ್ಲಿ ಹುದುಗಿದೆ. ನಾಲ್ಕನೇ ವೀರಗಲ್ಲು ಶಾಸನ ಬೀರೇಶ್ವರ ಹಳ್ಳಿಯಲ್ಲಿ ದೊರೆತಿದ್ದು, ಇದನ್ನು ಮಹಮ್ಮದ್ ಕಲೀಮ್ ಉಲ್ಲಾ ಪತ್ತೆ ಮಾಡಿದ್ದಾರೆ. ಸುಮಾರು 25 ವರ್ಷದ ಹಿಂದೆ ಚರಂಡಿಯಲ್ಲಿ ಬಿದ್ದಿದ್ದ ವೀರಗಲ್ಲು ಶಾಸ್ತ್ರವನ್ನು ಸಂರಕ್ಷಿಸಿ ವೀರಭದ್ರಸ್ವಾಮಿ ದೇವಾಲಯದ ಪಕ್ಕದಲ್ಲಿ ಇರಿಸಿದ್ದು, ಲಿಪಿ ಮತ್ತು ಬಳಸಿರುವ ಕಲ್ಲಿನ ಆಧಾರದ ಮೇಲೆ ಹೊಯ್ಸಳರ ಕಾಲಕ್ಕೆ ಸೇರಿದ್ದು ಎನ್ನಬಹುದು. ಮೂರು ಹಂತದ ವೀರಗಲ್ಲಾಗಿದ್ದು, ಶಿಲ್ಪಕಲಾ ದೃಷ್ಟಿಯಿಂದ ಸುಂದರವಾಗಿದೆ. ಯುದ್ಧದ ಹೋರಾಟದ ದೃಶ್ಯ ಸ್ವರ್ಗದ ಕಲ್ಪನೆ ಶಿವ ಸಾನಿಧ್ಯವನ್ನು ಚಿತ್ರಿಸಲಾಗಿದೆ.