ಜಿಲ್ಲೆ

ಗಮನ ಸೆಳೆದ ಅನಾಥರ ಮಾಯಿ ನಾಟಕ

Dharwada - Basavaraj Idli

ಹುಬ್ಬಳ್ಳಿ: ನಗರದ ಸುನಿಧಿ ಕಲಾ ಸೌರಭ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರಸ್ತುತಪಡಿಸಿದ ಮಹಾರಾಷ್ಟ್ರದ ಸಿಂಧೂತಾಯಿ ಸಪಕಾಳ ಅವರ ಜೀವನದಾಧಾರಿತ "ಅನಾಥರ ಮಾಯಿ' ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.

ರೋಟರಿ ಸಂಸ್ಥೆಯು ಇಲ್ಲಿಯ ಗಂಗಾಧರನಗರ ಹಾಗೂ ಸುತ್ತಲಿನ ಪ್ರದೇಶದ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ನೀಡಲಾಯಿತು.

ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರ ನಿರ್ದೇಶನದಲ್ಲಿ ಕಲಾವಿದೆ ವೀಣಾ ಅಠವಲೆ ಅವರ ಏಕವ್ಯಕ್ತಿ ನಟನೆಯ ನಾಟಕವು ನೋಡುಗರಲ್ಲಿ ಪ್ರತಿ ಕ್ಷಣಕ್ಕೂ ಕುತೂಹಲ ಕೆರಳಿಸುತ್ತ ಹೋಯಿತು.

ಬಾಲ್ಯದಿಂದ ಕಷ್ಟದಲ್ಲಿ ಬೆಳೆದು, ವಿದ್ಯೆ ಕಲಿಯಲು ಪ್ರೋತ್ಸಾಹ ಸಿಗದೇ, ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದರೂ ಯಾವ ಸುಖ ಸಂತೋಷಗಳನ್ನು ಅನುಭವಿಸದ, ಪತಿಯಿಂದಲೂ ದೂರವಾಗಿ ಅನಾಥಳಾಗಿ ಉಳಿದ ಮಹಿಳೆ ಸಿಂಧೂತಾಯಿ.

ಅಸಹಾಯಕತೆ ಇದ್ದರೂ ಜೀವನದಲ್ಲಿ ಜಿಗುಪ್ಸೆಗೊಳ್ಳದೇ, ಸ್ಮಶಾನದಲ್ಲಿ ಬದುಕುಳಿದಳು. ಶವಸಂಸ್ಕಾರಕ್ಕೆ ತಂದ ಹಿಟ್ಟಿನಿಂದ ಹೆಣ ಸುಡುವ ಬೆಂಕಿಯಲ್ಲಿ ರೊಟ್ಟಿ ಬೇಯಿಸಿ ತಿಂದು, ಕಷ್ಟ ಸಾಗರದಲ್ಲಿ ಮಿಂದೆದ್ದು, ಸಮಾಜದಲ್ಲಿ ತಲೆ ಎತ್ತಿ ನಿಂತ ಮಹಿಳೆಯ ಸತ್ಯ ಕಥೆಯು ನೋಡುಗರ ಕಣ್ಣುಗಳನ್ನು ತೇವಗೊಳಿಸಿತು.

ಬದುಕಿನಲ್ಲಿ ಇಷ್ಟು ದೊಡ್ಡ ಕಷ್ಟ ಕಂಡು ಮೇಲೆದ್ದ ಮಹಿಳೆಗೆ ಅನೇಕ ಗೌರವ ಪುರಸ್ಕಾರಗಳು, ರಾಷ್ಟ್ರಪತಿಗಳಿಂದ ಸನ್ಮಾನಗಳು ಸಿಕ್ಕ ವಿಷಯಗಳನ್ನು ನಾಟಕದ ಮೂಲಕ ಕೇಳಿ ಆನಂದಿತರಾದರು.

ಅನಾಥಳಾಗಿ ಉಳಿದು ಅನಾಥ ಮಕ್ಕಳಿಗೇ ತಾಯಿಯಾಗಿ, ಸಾವಿರಾರು ಮಕ್ಕಳ ಅಭಿವೃದ್ಧಿಗಾಗಿ ಶ್ರಮಪಟ್ಟು, ಬಡತನದ ಬಾಳಿಗೆ ಬೆಳಕಾಗಿ ಬದುಕಲು ಮಾರ್ಗದರ್ಶನ ನೀಡುವ ಅನಾಥರ ಮಾಯಿ ನಾಟಕವು ಹೃದಯಸ್ಪರ್ಶಿಯಾಗಿ ಮೂಡಿ ಬಂದಿತು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ತರಬೇತಿ ಶಿಕ್ಷಕಿ ಜಾಧವ, ಕಲಾವಿದರು ಉಪಸ್ಥಿತರಿದ್ದರು.
ಭಾರತಿ ಚಂದ್ರಶೇಖರ ಗೋಕಾಕ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.