ಜಿಲ್ಲೆ

ಕಬಡ್ಡಿಯಲ್ಲಿ ಅನನ್ಯಾ ಸಾಧನೆ ಶ್ಲಾಘನೀಯ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ದೇಶದ ಹೆಮ್ಮೆಯ ಕ್ರೀಡೆ ಕಬಡ್ಡಿಯಲ್ಲಿ ಗ್ರಾಮೀಣ ಪ್ರತಿಭೆ ಅನನ್ಯಾ ಅವರ ಸಾಧನೆ ಶ್ಲಾಘನೀಯ ಎಂದು ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಹೇಳಿದರು.

ಅಂಡರ್ 18 ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಾಟುಕೊಡಿಗೆಯ ಅನನ್ಯಾ ಎಂ.ಆಚಾರ್ಯ ಅವರನ್ನು ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಸನ್ಮಾನಿಸಿ ಮಾತನಾಡಿ, ಕಬಡ್ಡಿ ಗ್ರಾಮೀಣ ಕ್ರೀಡೆಯಾಗಿದ್ದು, ಇದರಲ್ಲಿ ಆಡಲು ದೃಢ ಮನಸ್ಸು, ಸದೃಢ ದೇಹ ಅಗತ್ಯ. ಇದರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದು ಸಹ ಹೆಮ್ಮೆಯ ವಿಚಾರ. ಅನನ್ಯಾ ಅವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಈ ಕ್ರೀಡೆಯಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದರಿಂದ ಕರ್ನಾಟಕ ತಂಡದ ಉಪ ನಾಯಕಿಯಾಗಿರುವುದು ಸಂತಸ ತಂದಿದೆ ಎಂದರು.

ಸನ್ಮಾನ ಸ್ವೀಕರಿಸಿದ ಅನನ್ಯಾ ಮಾತನಾಡಿ, ಎಲ್ಲರ ಪ್ರೋತ್ಸಾಹದಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ ಎಂದರು. ಅನನ್ಯಾ ಪಾಲಕರಾದ ಎಂ.ಜೆ.ಮಹೇಶ್ ಆಚಾರ್ಯ, ಅನ್ನಪೂರ್ಣ, ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಚೈತನ್ಯ ವೆಂಕಿ, ಎಸ್.ಎಲ್.ಚೇತನ್, ಸನತ್ ಶೆಟ್ಟಿ, ಅಮೋಘ್ ಮತ್ತಿತರರು ಹಾಜರಿದ್ದರು.