ಸುಬ್ರಹ್ಮಣ್ಯ: ಜೀವ ವೈವಿಧ್ಯ ಸಂರಕ್ಷಣೆ ಅತ್ಯಗತ್ಯವಾಗಿದ್ದು, ರಾಜ್ಯದ 175 ತಾಲೂಕುಗಳಲ್ಲಿ ಮತ್ತು 6 ಸಾವಿರ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಈ ಮೂಲಕ ಗ್ರಾಮ ಗ್ರಾಮಗಳಲ್ಲಿ ಜೀವ ವೈವಿಧ್ಯ ಸಬಲೀಕರಣ ಮಾಡಲಾಗುತ್ತಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೀವ ವೈವಿಧ್ಯಗಳ ಮಹತ್ವದ ಬಗ್ಗೆ ಜನತೆ ಜಾಗೃತರಾಗಿ ಅದರ ಸಂರಕ್ಷಣೆಗೆ ಮುಂದಾಗಲು ಬೇಕಾದ ಯೋಜನೆಯನ್ನು ನಿರ್ವಹಣಾ ಸಮಿತಿ ಮೂಲಕ ಮಂಡಳಿ ನೆರವೇರಿಸುತ್ತಿದೆ. ರಾಜ್ಯದ ಶೇ.96 ಗ್ರಾಮ ಪಂಚಾಯಿತಿಗಳಲ್ಲಿ, ಶೇ.50 ತಾಲೂಕು ಪಂಚಾಯಿತಿಗಳಲ್ಲಿ ಜೀವವೈವಿಧ್ಯ ದಾಖಲಾತಿಯನ್ನು ಸಮರ್ಪಕವಾಗಿ ನೆರವೇರಿಸಲಾಗಿದೆ. ನಗರ ಪ್ರದೇಶಗಳಲ್ಲಿ ದಾಖಲಾತಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ಈ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳಿಗೆ ನೀಡಲಾಗುವುದು ಎಂದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಚಟುವಟಿಕೆ ನಡೆಸಲು ಸಹಕಾರಿಯಾಗಲು 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ನೀಡುವ ಬಗ್ಗೆ ಚಿಂತನೆ ನಡೆದಿದೆ. ಮಂಡಳಿಯಿಂದ ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ ಕಾರ್ಯ ನಡೆಯುತ್ತಿದೆ. ಅರಣ್ಯ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಸಸ್ಯಶಾಸ್ತ್ರ ವಿಜ್ಞಾನಿಗಳು ಅಧ್ಯಯನ ನೆರವೇರಿಸಲಿದ್ದಾರೆ ಎಂದರು.
ಸುಬ್ರಹ್ಮಣ್ಯ ಪಿಡಿಒ ಮುತ್ತಪ್ಪ ಧವಳಗಿ ಉಪಸ್ಥಿತರಿದ್ದರು.
ನಾಡಿನಲ್ಲಿ ಒತ್ತಡಕ್ಕೆ ಸಿಲುಕಿರುವ ಕಾಡು, ಪರ್ವತ, ನದಿ, ಕಣಿವೆ, ದೇವರ ಕಾಡು, ಗೋಮಾಳ, ಇತ್ಯಾದಿಗಳ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಗೆ ಯೋಜನೆ ಸಿದ್ಧಪಡಿಸಲಾಗುವುದು. ರಾಜ್ಯದ ಸಮಗ್ರ ಪ್ರಾಣಿ ಸಂಪತ್ತಿನ ಕ್ರೋಡೀಕರಣ ಮಾಡಿ ಗ್ರಂಥ ರಚಿಸಲಾಗುವುದು. ಮುಂದೆ ರಾಜ್ಯಮಟ್ಟದಲ್ಲಿ ಜೀವ ವೈವಿಧ್ಯ ಕೋಶ ಸ್ಥಾಪಿಸಲಾಗುವುದು.
- ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಕರ್ನಾಟಕ ಜೀವವೈವಿಧ್ಯ ಮಂಡಳಿ