ಜಿಲ್ಲೆ

ಹ್ಯಾಪಿ ಬರ್ತ್ ಡೇ ಅನಂತ್ ಅಂಕಲ್! ವಿಶೇಷ ಮಕ್ಕಳ ಜತೆ ಹಿರಿಯ ನಟನ 75ನೇ ಜನ್ಮದಿನಾಚರಣೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಹಿರಿಯ ನಟ ಅನಂತನಾಗ್ ತಮ್ಮ 75ನೇ ಜನ್ಮದಿನವನ್ನು ಸೋಮವಾರ ವಿಶೇಷ ಮಕ್ಕಳೊಂದಿಗೆ ಅಚರಿಸಿಕೊಂಡರು.
ನಂತೂರಿನಲ್ಲಿರುವ ವಿಶೇಷ ಮಕ್ಕಳ ಚಟುವಟಿಕೆ ಕೇಂದ್ರ ಅನಿರ್ವೇದ ಫೌಂಡೇಶನ್‌ಗೆ ಪತ್ನಿ ಗಾಯತ್ರಿ, ಪುತ್ರಿ ಅದಿತಿ ಹಾಗೂ ಅಳಿಯ ವಿವೇಕ್ ಹಾಗೂ ಕುಟುಂಬದ ಸ್ನೇಹಿತರ ಜತೆ ಭೇಟಿ ನೀಡಿದ ಅವರು, ಮಕ್ಕಳ ಸಮಕ್ಷಮದಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಸಹಿ ಹಂಚಿದರು. ಮಕ್ಕಳು ಹ್ಯಾಪಿ ಬರ್ತ್‌ಡೇ ಅನಂತ ಅಂಕಲ್ ಎನ್ನತ್ತ ಶುಭ ಹಾರೈಸಿದರು.
ಬುದ್ಧಿಮಾಂದ್ಯ ಮಕ್ಕಳೇ ಸಿದ್ಧಪಡಿಸಿದ ಬರ್ತ್‌ಡೇ ಉಡುಗೊರೆಯನ್ನು ನಟನಿಗೆ ನೀಡಲಾಯಿತು. ಬಳಿಕ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡು, ವಿನೋದಾವಳಿ ವೀಕ್ಷಿಸಿದರು. ಮಕ್ಕಳೊಂದಿಗೆ ಜನ್ಮದಿನಾಚರಣೆ ಆಯೋಜಿಸಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ ಅನಂತನಾಗ್, ಬುದ್ಧಿಮಾಂದ್ಯ ಮಕ್ಕಳನ್ನು ಸಲಹುವುದು, ಸಕ್ರಿಯ ಚಟುವಟಿಕೆಗೆಯಲ್ಲಿ ಅವರನ್ನು ತೊಡಗಿಕೊಳ್ಳುವಂತೆ ಮಾಡುವುದು ಸುಲಭವಲ್ಲ. ಇಂತಹ ಪುಣ್ಯದ ಕಾರ್ಯದಲ್ಲಿ ತೊಡಗಿಕೊಳ್ಳುವ ಸಿಬ್ಬಂದಿಯ ತಾಳ್ಮೆ, ಶ್ರಮ, ಬದ್ಧತೆ ಶ್ಲಾಘನೀಯ. ಇಂತಹ ಮಕ್ಕಳಲ್ಲಿ ವಿಶೇಷ ಗುಣ, ಶಕ್ತಿ ಇದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳನ್ನು ದಿವ್ಯಾಂಗರು ಎಂದು ಕರೆಯಬೇಕು ಎಂದಿದ್ದಾರೆ. ಬುದ್ಧಿಮಾಂದ್ಯರನ್ನು ಸರಿಪಡಿಸುವ ಪ್ರಯತ್ನ ಬಹಳ ಕೌತುಕ ಅನಿಸುತ್ತಿದೆ, ಇದು ಯಾರೂ ಮಾಡದ ದೊಡ್ಡ ಕೆಲಸ ಎಂದು ಅನಂತನಾಗ್ ಹೇಳಿದರು.
ಪಾಲಿಕೆ ಸದಸ್ಯ ನವೀನ್ ಡಿಸೋಜ, ಫೌಂಡೇಶನ್ ನಿರ್ದೇಶಕಿ ಡಾ.ಕೆ.ಟಿ.ಶ್ವೇತಾ, ವೈದ್ಯ ಡಾ.ರವಿಚಂದ್ರ, ಸಾಮಾಜಿಕ ಕಾರ್ಯಕರ್ತ ನರೇಶ್ ಶೆಣೈ ಉಪಸ್ಥಿತರಿದ್ದರು.

(((ಬಾಕ್ಸ್)))

ದೇವಸ್ಥಾನಗಳಿಗೆ ಭೇಟಿ
ಈ ವರ್ಷ ಮಂಗಳೂರಿನಲ್ಲಿಯೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅನಂತನಾಗ್, ಸೋಮವಾರ ಮುಂಜಾನೆ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಉಮಾಮಹೇಶ್ವರ ದೇವಸ್ಥಾನ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿದರು. ಬಳಿಕ ಬಾಲ್ಯದ ದಿನಗಳನ್ನು ಕಳೆದ ಕಾಸರಗೋಡು ಬಳಿಯ ಕಾಞಂಗಾಡಿನಲ್ಲಿರುವ ಆಶ್ರಮಕ್ಕೆ ತೆರಳಿದರು.