ಜಿಲ್ಲೆ

ಗದ್ದೆಯಿಂದ ಬೆಳೆದು ಬಂದಿದೆ ನೆಲದ ಸಂಸ್ಕೃತಿ : ಡಿಸಿ ಮುಲ್ಲೈ ಮುಗಿಲನ್ ಅಭಿಮತ

ಸೌಮ್ಯ ಆರ್

ಬಂಟ್ವಾಳ: ದೇಶದ ಬೆನ್ನೆಲುಬಾಗಿರುವ ರೈತ ಸಂತೋಷವಾಗಿದ್ದರೆ ಇಡೀ ಜಗತ್ತೇ ಸಂತೋಷವಾಗಿರುತ್ತದೆ. ಪ್ರತಿಯೊಬ್ಬರ ಆಹಾರ ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು-ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿ ಬೆಳೆದು ಬಂದಿರುವುದು ಗದ್ದೆಗಳಿಂದ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರುಗಿದ 6ನೇ ವರ್ಷದ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಧ್ವಜಾರೋಹಣ ಡಾ.ರೂಪಲತಾ ಕೊಂಗಲಾಯಿ ನೆರವೇರಿಸಿದರು. ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ಉದ್ಘಾಟಿಸಿದರು. ದ.ಕ.ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೆ ಕ್ರೀಡಾಕೂಟ ಉದ್ಘಾಟಿಸಿದರು.

ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರ್ಕಾರಿ ಪದವಿಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣ ಮೂಲ್ಯ, ಮಲ್ಲರಾಯ ದೈವ ಪರಿಚಾರಕರಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಉಪಸ್ಥಿತರಿದ್ದರು.

ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆ ನಡೆಯಿತು. ಚಾಪೆ ನೇಯುವುದು, ಬುಟ್ಟಿ ನೇಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೇಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ದಿನವಿಡೀ ಕರ್ತವ್ಯದ ಒತ್ತಡದಿಂದ ವ್ಯಸ್ತರಾಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾನುವಾರ ಯುವಕರೊಂದಿಗೆ ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿದರು. ಅಧಿಕಾರದ ಹಮ್ಮು-ಬಿಮ್ಮುಗಳನ್ನು ಬಿಟ್ಟು ಮಕ್ಕಳ ಜತೆ ಮಗುವಾಗಿ ಬೆರೆತು ಮಣ್ಣಿನ ಮಗನಾದರು. ಜಿಲ್ಲಾಧಿಕಾರಿ ಕೆಸರಿನಲ್ಲೂ ಮಕ್ಕಳ ಜತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು. ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ನಿರೂಪಿಸಿದರು.