ಬೆಂಗಳೂರು: ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯ ಹಿನ್ನೆಲೆಯಲ್ಲಿ ಶನಿವಾರ ಎಲ್ಲೆಡೆ ಅನಂತ ವ್ರತವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಅನಂತ ಚತುರ್ದಶಿ ಎಂದೇ ಪ್ರಸಿದ್ಧವಾಗಿರವ ಈ ದಿನದಂದು ಅನಂತಪದ್ಮನಾಭ ಸ್ವಾಮಿಯನ್ನು ಪೂಜಿಸುವ ಮೂಲಕ ಅನಂತ ಲಗಳನ್ನು ಪಡೆದುಕೊಳ್ಳಬಹುದು ಎಂಬುವ ನಂಬಿಕೆ ಇದೆ.
12 ಜಾತಿಯ ನಾಗಕುಲದಲ್ಲಿ ಪ್ರಥಮನಾಗಿರುವ ಅನಂತನನ್ನು ಮಹಾವಿಷ್ಣುವು ತನ್ನ ಹಾಸಿಗೆಯನ್ನಾಗಿಸಿಕೊಂಡಿದ್ದು, ಭಗವಂತ ಪವಡಿಸಿರುವ ಕಾರಣಕ್ಕೆ ಸಾಕ್ಷತ್ ಅನಂತನು ಭಗವತ್ ಸ್ವರೂಪಿಯೇ ಆಗಿದ್ದು ಅನಂತ ಪದ್ಮನಾಭಸ್ವಾಮಿಯಾಗಿ ಪೂಜೆಗೊಳ್ಳುತ್ತಿದ್ದಾನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ತಿಳಿಸಿರುವಂತೆ ನಾಗಕುಲದ ಆದಿಪುರುಷನೂ ವಿಷ್ಣುವೇ ಆಗಿರುವುದರಿಂದ ಅನಂತ ವ್ರತವನ್ನು ಕ್ರಮಬದ್ಧವಾಗಿ ಆಚರಿಸುವ ಮೂಲಕ ಅನಂತ ಲಗಳನ್ನು ಪಡೆದುಕೊಳ್ಳಬಹುದು.
ನಗರದ ವಿವಿಧ ವಿಷ್ಣು ದೇವಾಲಯಗಳಲ್ಲಿ ಅನಂತನ ವ್ರತವನ್ನು ಆಚರಿಸಲಾಯಿತು. ಕಾಟನ್‌ಪೇಟೆಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಕೋಟೆ ದೇವಾಲಯ, ಹನುಮಂತನಗರದ ಕುಮಾರಸ್ವಾಮಿ ದೇವಾಲಯ, ಸಜ್ಜನರಾವ್ ವೃತ್ತದ ಸುಬ್ರಮಣ್ಯ ದೇವಾಲಯಗಳಲ್ಲಿ ಅನಂತ ವ್ರತದ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ವೈಯಕ್ತಿಕವಾಗಿ ಪದ್ಧತಿ ಇರುವ ಮನೆಗಳಲ್ಲಿ ಕೂಡಾ ದಂಪತಿಗಳು ಕುಳಿತು ಮಹಾಲಕ್ಷ್ಮಿ ಸಮೇತ ಅನಂತ ಪದ್ಮನಾಭಸ್ವಾಮಿಯ ಸುವರ್ಣ ಕಳಸವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ 14 ಗಂಟುಗಳುಳ್ಳ ಅನಂತನ ದಾರವನ್ನು ಧರಿಸಿ ಪ್ರಾರ್ಥಿಸಿದರು.
ರಾಜಗುರು ಬಿ.ಎಸ್.ದ್ವಾರಕನಾಥ್ ಪುತ್ರಿ ಡಾ.ಮೇಖಲ ಅವರ ನಿವಾಸದಲ್ಲಿ ಅನಂತ ವ್ರತದ ಹಿನ್ನೆಲೆಯಲ್ಲಿ ವೇದ ಪಾರಾಯಣ, ಅಷ್ಟಾವಧಾನ ಸೇವೆ ಹಾಗೂ ಅನಂತ ಪದ್ಮನಾಭಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.