ಜಿಲ್ಲೆ

ಅದಮ್ಯ ಚೇತನದಿಂದ ಅನಂತೋತ್ಸವ,  ಅನಂತ ಪ್ರೇರಣಾ ಕೇಂದ್ರಕ್ಕೆ ಗಣ್ಯರ ಭೇಟಿ

Dharwada - Basavaraj Idli

ಹುಬ್ಬಳ್ಳಿ: ಕೇಂದ್ರದ ಮಾಜಿ ಸಚಿವ ದಿ. ಎಚ್.ಎನ್. ಅನಂತಕುಮಾರ ಅವರು ಸದಾ ಇತರರಿಗೆ ಪ್ರೇರಣಾದಾಯಿಯಾಗಿಯೇ ಬದುಕಿದವರು, ಹಸನ್ಮುಖಿಯಾಗಿ ಎಲ್ಲರ ಮನಸ್ಸನ್ನು ಗೆದ್ದವರು. ಅವರ ಸ್ಮರಣೆಗಾಗಿ ಇಲ್ಲಿಯ ವಿಜಯನಗರದಲ್ಲಿ ಆರಂಭಿಸಲಾಗಿರುವ ಅನಂತ ಪ್ರೇರಣಾ ಕೇಂದ್ರದ ಎರಡನೇ ವಾರ್ಷಿಕೋತ್ಸವವನ್ನು ಭಾನುವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಪ್ರೇರಣಾ ಕೇಂದ್ರದಲ್ಲಿ ಅನಂತಕುಮಾರ ಅವರು ಎಬಿವಿಪಿಯಿಂದ ಹಿಡಿದು ಬಿಜೆಪಿ ಕಾರ್ಯಕರ್ತರಾಗಿ ದೇಶದ ವಿವಿಧೆಡೆ ಸಂಚರಿಸಿ ಸಂಟನೆಗೆ ಶ್ರಮಿಸಿದ ಸಂದರ್ಭದ ಭಾವಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ಪ್ರಧಾನಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಅವುಗಳ ಸ್ಮರಣೆಯ ಜತೆಗೆ ಅವರು ಬಳಸಿದ್ದ ಹಲವು ವಸ್ತುಗಳು, ದೆಹಲಿಯ ಮನೆಯಲ್ಲಿದ್ದ ಪೀಠೋಪಕರಣ, ಮುಂತಾದವುಗಳನ್ನು ಪ್ರೇರಣಾ ಕೇಂದ್ರದಲ್ಲಿ ಇರಿಸಲಾಗಿದೆ.

ಬಿಜೆಪಿ ಪ್ರಮುಖರಾದ ಗೋವಿಂದ ಕಾರಜೋಳ, ಶಿವಕುಮಾರ ಉದಾಶಿ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಹಾರಾಷ್ಟ್ರದ ಖಾದಿ ಮಂಡಳಿಯ ಚಿದಂಬರ ಜಾಧವ, ರಾಜಕುಮಾರ ತೇಲ್ಕೂರ, ಶ್ರೀಕಾಂತ ಕುಲಕರ್ಣಿ, ಎಂ. ನಾಗರಾಜ, ಗದಗ ಗ್ರಾಮೀಣಾಭಿವೃದ್ಧಿ ವಿವಿಯ ವಿಷ್ಣುಕಾಂತ ಚಟಪಲ್ಲಿ ಇತರರು ಪಾಲ್ಗೊಂಡರು.
ಪ್ರೇರಣಾ ಕೇಂದ್ರ ವೀಕ್ಷಿಸಿ ಅನಂತಕುಮಾರ ಅವರೊಂದಿಗಿನ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಎಲ್ಲರಿಗೂ ಪ್ರೇರಣೆಯಾಗಬೇಕು: ವಾಷಿರ್ಕೋತ್ಸವ ಅಂಗವಾಗಿ ಕಳೆದ ಎರಡು ತಿಂಗಳಿಂದ ಅದಮ್ಯ ಚೇತನ ವತಿಯಿಂದ ಮಕ್ಕಳು, ಮಹಿಳಾ ಮಂಡಳದವರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.

ಪ್ರಾಸ್ತಾವಿಕ ಮಾತನಾಡಿದ ತೇಜಶ್ವಿನಿ ಅನಂತಕುಮಾರ ಅವರು, ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ ಅನಂತ ಪ್ರೇರಣಾ ಕೇಂದ್ರದ ಎರಡನೇ ವಾರ್ಷಿಕೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಈ ಕೇಂದ್ರವು ಸಮಾಜಸೇವೆ ಮಾಡುವವರಿಗೆ ಪ್ರೇರಣೆಯಾಗಲಿ ಎಂಬುದು ಅದಮ್ಯ ಚೇತನದ ಉದ್ದೇಶ. ಸಂಸ್ಥೆಯ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದರು.

ಇಲ್ಲಿ ಸ್ಥಾಪಿಸಿದ ಮ್ಯೂಷಿಯಂ ಕೇವಲ ಪ್ರದರ್ಶನಕ್ಕೆ ಅಲ್ಲ ಬದಲಾಗಿ ನಿರಂತರವಾಗಿ ಪ್ರೇರಣೆ ನೀಡುವ ಕಾರ್ಯ ಇಲ್ಲಿಂದ ಆಗಲಿದೆ. ಭಜನೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆ, ಮಹಿಳಾ ಮಂಡಳದ ಸದಸ್ಯರು ಪಾಲ್ಗೊಂಡು ಉತ್ಸಾಹ ಪ್ರಕಟಿಸಿದರು. ಇಂತಹ ಉತ್ಸವಗಳು ವರ್ಷವಿಡಿ ನಡೆಯಲಿವೆ ಎಂದರು.

ಅದಮ್ಯ ಚೇತನವು ನಿತ್ಯ ಲಕ್ಷಾಂತರ ಮಕ್ಕಳಿಗೆ ಊಟ ನೀಡುತ್ತಿದೆ. ಅಡುಗೆ ಮನೆಯನ್ನು ಕಸಮುಕ್ತಗೊಳಿಸುವ ಜತೆಗೆ ಪರ್ಯಾಯ ಇಂಧನ ಉತ್ಪಾದನೆ ಮಾಡಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದೆ. ಸಂಸ್ಥೆಯಿಂದ ಇದೀಗ ಪ್ಲೇಟ್ ಬ್ಯಾಂಕ್ ಆರಂಭ ಮಾಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಎಚ್.ಎನ್. ನಂದಕುಮಾರ, ಭಾರತಿ ನಂದಕುಮಾರ, ವಿ.ಜಿ. ಭಟ್, ಭಾರತಿ ರವೀಂದ್ರ ಕುಮಾರ, ಸ್ವಾತಿ ಪಟೇಲ, ಇತರರು ಇದ್ದರು.

ಬಹುಮಾನ: ಭಜನೆಯಲ್ಲಿ ಬಹುಮಾನ ಪಡೆದವರ ಹೆಸರುಗಳನ್ನು ಶ್ರೀನಿವಾಸ ಜೋಶಿ ಪ್ರಕಟಿಸಿದರು. ಚಿನ್ಮಯ ಸ್ಕೂಲ್ ಮಕ್ಕಳು ಮೂರು ಬಹುಮಾನಗಳನ್ನು ಪಡೆದರು. ಮಾರುತಿ ಮಹಿಳಾ ಮಂಡಳ, ಹರಿಜೋಶಿ ಮಹಿಳಾ ಮಂಡಳ ಹಾಗೂ ಶ್ರೀಕೃಷ್ಣ ಮಹಿಳಾ ಮಂಡಳಗಳು ಪ್ರಶಸ್ತಿ ಪಡೆದುಕೊಂಡವು. ನಿರ್ಣಾಯಕರಾಗಿ ರೇಖಾ ಹೆಗಡೆ ಹಾಗೂ ತಂಡದವರು ಕಾರ್ಯ ನಿರ್ವಹಿಸಿದರು. ವೀಣಾ ಅಠವಲೆ ನಿರೂಪಿಸಿದರು.

ರಾಧಿಕಾ ಓಕ್ ಅವರ ನೇತೃತ್ವದಲ್ಲಿ ರಚಿಸಿದ ಭಗವದ್ಗೀತೆ ರೂಪಕ ಪ್ರೇಕ್ಷಕರ ಗಮನ ಸೆಳೆಯಿತು. ಕಲಾವತಿ ಆಮಲೆ, ಸಾವಿತ್ರಿ ಹಾಗೂ ಇತರರು ಸಹಕಾರ ನೀಡಿದ್ದರು.