ಜಿಲ್ಲೆ

ಆನಂದಕಂದ ಸರ್ಟಿಫಿಕೇಟ್ ಕೋರ್ಸ್ ಆರಂಭ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಸಹಯೋಗದೊಂದಿಗೆ ಶುಕ್ರವಾರ ಡಾ. ಬೆಟಗೇರಿ ಕೃಷ್ಣಶರ್ಮ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ ಹಾಗೂ ಕಾವ್ಯ ಗಾಯನ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅತಿಥಿಗಳಾಗಿದ್ದ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಸದಸ್ಯ ಹಾಗೂ ಆರ್ ಪಿಡಿ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಎಚ್.ಬಿ. ಕೋಲ್ಕಾರ ಬೆಟಗೇರಿ ಕೃಷ್ಣಶರ್ಮ ಅವರ ಬದುಕಿನ ಕುರಿತು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಆನಂದಕಂದ ಕಾವ್ಯನಾಮದಿಂದಲೇ ಹೋರಾಡಿದ ಹೋರಾಟಗಾರರಾಗಿದ್ದಾರೆ.

ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸಾಹಿತ್ಯಿಕ ಸೇವೆ ಸ್ಮರಣೀಯವಾಗಿದೆ. ಹೆಸರಿದ್ದು ಸಹ ಭಾರತಾಂಬೆಯ ಸೇವೆಗಾಗಿ ಅನಾಮಿಕನಂತೆ ಬದುಕಿ ಬಾಳಿದ ಬೆಳವಲದ ನಾಡಿನ ಶ್ರೇಷ್ಠ ಸಾಹಿತಿಗಳ ಕುರಿತ ಸರ್ಟಿಫಿಕೇಟ್ ಕೋರ್ಸ್ ಇದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಕೃಷ್ಣಶರ್ಮ ಅವರು ರಚಿಸಿದ ಕಾವ್ಯ ಗಾಯನ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿತು. ಡಾ. ಎಸ್.ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಲ್. ಪಾಟೀಲ್ ಮಾತನಾಡಿ, ಕೃಷ್ಣಶರ್ಮ ಅವರ ಸಾರ್ಥಕ ಬದುಕಿನ ಸೇವೆ ತ್ಯಾಗವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಡಾ. ನೇತ್ರಾವತಿ ಗಬ್ಬೂರ ಸ್ವಾಗತಿಸಿದರು. ನಿಶಾ ರೇಷ್ಮಿ ಪ್ರಾರ್ಥಿಸಿದರು. ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿ ಸಮರ್ಥ ಎ. ವಂದಿಸಿದರು. ಪ್ರೊ. ಪ್ರತಿಭಾ ಕೆ. ಕಾರ್ಯಕ್ರಮ ನಿರೂಪಿಸಿದರು.