ಆನೇಕಲ್: ಕೆರೆಯನ್ನೇ ನುಂಗಿ ನಿರ್ಮಿಸಲಾಗಿದ್ದ ಕ್ರೀಡಾಂಗಣವೀಗ ಮಳೆ ನೀರಿನಿಂದ ಜಲಾವೃತವಾಗಿ ಮತ್ತೆ ಕೆರೆಯಂತಾಗಿದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕ್ರೀಡಾಂಗಣ ಬಳಕೆಗೆ ಯೋಗ್ಯವಲ್ಲದಂತಾಗಿದೆ.
ಪಟ್ಟಣದ ಚಿಕ್ಕಕೆರೆಯನ್ನು ಮುಚ್ಚಿ ಕ್ರೀಡಾಂಗಣ ಮಾಡಿ 15 ವರ್ಷ ಕಳೆದರೂ ಉಪಯೋಗಿಸಿಲ್ಲವಾದ್ದರಿಂದ ಮಳೆಯಿಂದ ಕೆರೆಯಾಗಿ ಪರಿವರ್ತನೆಯಾಗಿದೆ, ಕ್ರೀಡಾಂಗಣ ಈಗ ಮೀನು, ಹಾವು, ಕಪ್ಪೆಗಳು ಸೇರಿ ಜಲಚರಗಳ ವಾಸಸ್ಥಾನವಾಗಿದೆ.
ಕೆಂಪೇಗೌಡರು ಬೆಂಗಳೂರಿನಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿ ಹೆಸರು ಮಾಡಿದ್ದರು. ಆದರೆ ಜನಪ್ರತಿನಿಧಿಗಳು ಕೆರೆ ಮುಚ್ಚಿ ಕ್ರೀಡಾಂಗಣ ಮಾಡಿದ್ದು, ಮಳೆ ಕೃಪೆ ತೋರುತ್ತಿದ್ದಂತೆ ಕ್ರೀಡಾಂಗಣ ಮತ್ತೆ ಕೆರೆಯಾಗುತ್ತದೆ. ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಕ್ರೀಡಾಂಗಣ ಪಾಳುಬೀಳುವಂತಾಗಿದೆ. ಆನೇಕಲ್‌ನ ಚಿಕ್ಕಕೆರೆಯನ್ನು 2009ರಲ್ಲಿ ಮಾರ್ಪಾಡು ಮಾಡಿ, ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಹಾಗೂ ಆನೇಕಲ್ ಶಾಸಕ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಕ್ರೀಡಾಂಗಣ ಉದ್ಘಾಟನೆ ಮಾಡಿದ್ದರು. ಆದರೆ, 15 ವರ್ಷದಲ್ಲಿ ಒಂದು ಬಾರಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದು ಬಿಟ್ಟರೆ ಇದುವರೆಗೂ ಯಾವುದೇ ಕಾರ್ಯಕ್ರಮ, ಸ್ಫರ್ಧೆ ಇಲ್ಲಿ ನಡೆದಿಲ್ಲ. ಕ್ರೀಡಾಂಗಣದಲ್ಲಿ ಎಲ್ಲಿ ನೋಡಿದರೂ ಗಿಡಗಂಟಿ ಬೆಳೆದಿದೆ.
ಕಿತ್ತು ಹೋಗಿರುವ ವಿದ್ಯುತ್ ತಂತಿಗಳು
ಕ್ರೀಡಾಂಗಣದಲ್ಲಿ ಲೈಟ್ ಕಂಬ ಹಾಕಿದ್ದಾರೆ. ಆದರೆ, ಬೆಳಕಿನ ವ್ಯವಸ್ಥೆ ಇಲ್ಲದೆ ಎಲ್ಲ ಕಂಬಗಳಲ್ಲಿಯೂ ವಿದ್ಯುತ್ ತಂತಿಗಳು ಕಿತ್ತುಹೋಗಿವೆ. ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ಬೀಗ ಹಾಕಿದ್ದು, ಚಿಕ್ಕಕೆರೆ ಕ್ರೀಡಾಂಗಣ ಕೆರೆಯೂ ಅಲ್ಲದೆ, ಇತ್ತ ಕ್ರೀಡಾಂಗಣವೂ ಅಲ್ಲದೆ ಕ್ರೀಡಾಪಟುಗಳಿಗೆ ಬಳಕೆಗೂ ಬಾರದೆ ಹಾಳಾಗುತ್ತಿದೆ. 11 ಎಕರೆ ಕೆರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದ್ದು, ನಿರ್ವಹಣೆ ಇಲ್ಲದೆ ಇರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಇಡೀ ಕ್ರೀಡಾಂಗಣ ಜಲಾವೃತವಾಗಿದ್ದು, ಮತ್ತೆ ಚಿಕ್ಕಕೆರೆ ಗತವೈಭವ ಪಡೆದುಕೊಂಡಿದೆ.
ಅನುದಾನ ವ್ಯರ್ಥ
ಇಷ್ಟು ವರ್ಷಗಳು ಕಳೆದರೂ ಕ್ರೀಡಾಂಗಣ ಅಭಿವೃದ್ಧಿ ಕಾಣುತ್ತಿಲ್ಲ. ಆದರೆ, ಅಭಿವೃದ್ಧಿ ಹೆಸರಲ್ಲಿ ಸಾಕಷ್ಟು ಬಾರಿ ಹಣ ಬಿಡುಗಡೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೀರು ತುಂಬಿದ್ದ ಸಮಯದಲ್ಲೇ ಮತ್ತೆ ವೀಕ್ಷಕರ ಗ್ಯಾಲರಿ ನಿರ್ಮಾಣ ಮಾಡಿದ್ದು, ಇದಕ್ಕೂ ಲಕ್ಷಗಟ್ಟಲೆ ಹಣ ವ್ಯಯ ಮಾಡಿದ್ದು, ವ್ಯರ್ಥ ಎಂದು ಗೊತ್ತಿದ್ದರೂ ಅಧಿಕಾರಿಗಳು ಮತ್ತೆ ಮತ್ತೆ ಹಣ ಪೋಲು ಮಾಡುತ್ತಿದ್ದಾರೆ. ಯುವಜನ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ.
ಆನೇಕಲ್ ಪಟ್ಟಣದಲ್ಲಿ ಚಿಕ್ಕಕೆರೆ ಮುಚ್ಚಿ ಕ್ರೀಡಾಂಗಣ ಮಾಡಲಾಗಿದೆ. ಆದರೆ, ನಮ್ಮಂತಹ ಕ್ರೀಡಾಪಟುಗಳು ಒಮ್ಮೇಯೂ ಇಲ್ಲಿ ತರಬೇತಿ ಆಗಲಿ ಅಥವಾ ಆಟವಾಡಲು ಸಾದ್ಯವಾಗಿಲ್ಲ. - ರೇಣುಕಾ ಆನೇಕಲ್‌ನ ಅಂತಾರಾಷ್ಟ್ರೀಯ ಕ್ರೀಡಾಪಟು ಆನೇಕಲ್ ಪಟ್ಟಣಕ್ಕೆ ನೀರುಣಿಸುತ್ತಿದ್ದ ಚಿಕ್ಕಕೆರೆಯನ್ನು ಕ್ರೀಡಾಂಗಣ ಮಾಡಲಾಗಿದ್ದು, ಸಾಕಷ್ಟು ಮಂದಿ ರೈತರು ಈ ಕೆರೆ ನೀರಿನಿಂದ ಬೆಳೆ ಬೆಳೆಸುತ್ತಿದ್ದರು. ಆದರೆ, ಇದೀಗ ಕೆರೆ ನೀರು ಇಲ್ಲ, ಕನಿಷ್ಟ ಪಕ್ಷ ಕ್ರೀಡಾ ಚಟುವಟಿಕೆಯೂ ಇಲ್ಲದೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. - ಕೃಷ್ಣಪ್ಪ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಅಧ್ಯಕ್ಷ ಇನ್ನಾದರೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ಕ್ರೀಡಾಪಟುಗಳಿಗೆ ಸಹಾಯ ಆಗುವಂತೆ ಮಾಡಬೇಕಿದೆ. ಇಲ್ಲವಾದರೆ ಕೆರೆಯನ್ನು ಕೆರೆಯಂತೆ ಮಾಡಬೇಕು. ಇದರಿಂದ ಅಂತರ್ಜಲವಾದರೂ ವೃದ್ಧಿಯಾಗುತ್ತದೆ. - ಪ್ರದೀಪ್ ಸ್ಥಳೀಯರು ಚಿಕ್ಕಕೆರೆಯನ್ನು ನಾನು ಶಾಸಕನಾಗುವ ಮೊದಲೇ ಕ್ರೀಡಾಂಗಣ ಮಾಡಲಾಗಿತ್ತು. ಮಳೆ ಬಂದಾಗ ನೀರು ತುಂಬುತ್ತಿದೆ. ಹಾಗಾಗಿ ಕ್ರೀಡಾಂಗಣ ಅಭಿವೃದ್ಧಿ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಶೀಘ್ರ್ರದಲ್ಲೇ ಸಭೆ ಕರೆದು ಮಾತನಾಡುತ್ತೇನೆ. - ಬಿ.ಶಿವಣ್ಣ ಶಾಸಕ