ಜಿಲ್ಲೆ

ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

ಹಾಸನ: ಶಾಸಕರ‌ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 58 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಲ್ಲದೆ ಆಕೆಯ ಮೊಮ್ಮಗ ಕೂಡ ಗಾಯಗೊಂಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ಈ ಅಪಘಾತ ಸಂಭವಿಸಿದೆ.

ಹನುಮಂತನಗರದ ನಿವಾಸಿ ಹೂವಮ್ಮ‌ (58) ಮೃತಪಟ್ಟವರು. ಈಕೆಯ ಮೊಮ್ಮಗ ಪ್ರೀತಂ ಗಾಯಗೊಂಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿಯಲ್ಲಿ ಕೂತಿದ್ದ ಹೂವಮ್ಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಬೈಕ್​ ಏಕಾಏಕಿ ಬಲಕ್ಕೆ ಬಂದಿದ್ದರಿಂದ ಡಿಕ್ಕಿ ಹೊಡೆಯಿತು ಎಂದು ಕಾರು ಚಾಲಕ ಪ್ರವೀಣ್ ಹೇಳಿದ್ದಾನೆ. ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ಸಂದರ್ಭ ಕಾರಿನಲ್ಲಿ ಶಾಸಕರು ಇರಲಿಲ್ಲ. ಪ್ರಕರಣ ಸಂಭವಿಸಿದ ಸ್ಥಳಕ್ಕೆ ಬೇಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.