ಮಡಿಕೇರಿ: ಕುಶಾಲನಗರ ತಾಲೂಕು ಕೇಂದ್ರವಾಗಿ ಘೋ?ಣೆಯಾದರೂ ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆಯ ಕನಸು ಕನಸಾಗಿಯೇ ಉಳಿದಿದೆ.
ಹೌದು.. ತಾಲೂಕು ಕೇಂದ್ರ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಗಾಗಿ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಬಜೆಟ್‌ನಲ್ಲಿ ೩೦ ಕೋಟಿ ರೂಗಳನ್ನು ಮೀಸಲಿಟ್ಟಿದೆ. ಈಗಿರುವ ೫೦ ಹಾಸಿಗೆಗಳ ಆಸ್ಪತ್ರೆಯನ್ನು ೧೦೦ ಹಾಸಿಗೆಯುಳ್ಳ ಸುಸಜ್ಜಿತ ಸೌಲಭ್ಯಗಳ ಆಸ್ಪತ್ರೆಯಾಗಿ ಮಾರ್ಪಡಿಸಲು ಬೇಕಾದ ಜಾಗ ದೊರಕದ ಕಾರಣ ಆಸ್ಪತ್ರೆ ಮೇಲ್ದರ್ಜೆಯ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ಪ್ರಸಕ್ತ ಕುಶಾಲನಗರ ಪಟ್ಟಣದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಅತ್ಯಧಿಕ ಪ್ರಮಾಣದಲ್ಲಿ ಹೊರ ರೋಗಿಗಳು ಹಾಗು ಓಳ ರೋಗಿಗಳು ದಾಖಲಾಗುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೇ ಹಾಸನ ಕುಶಾಲನಗರ ರಾಜ್ಯ ಹೆದ್ದಾರಿ ಮತ್ತು ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಇದೇ ಕುಶಾಲನಗರ ಪಟ್ಟಣದೊಳಗೆ ಹಾದು ಹೋಗಿರುವ ಕಾರಣ ನಿತ್ಯವೂ ಒಂದಿಲ್ಲ ಒಂದು ಅಪಘಾತ ಪ್ರಕರಣಗಳು ಇಲ್ಲಿ ಘಟಿಸುತ್ತಿವೆ. ಜತೆಗೆ ನೆರೆಯ ಮೈಸೂರು ಜಿಲ್ಲೆಯ ಗಡಿ ಭಾಗದ ಹತ್ತಾರು ಗ್ರಾಮಗಳ ನೂರಾರು ಜನರು ಹತ್ತಿರ ಎಂಬ ಕಾರಣಕ್ಕೆ ಇದೇ ಕುಶಾಲನಗರ ಪಟ್ಟಣದ ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವುದರಿಂದ ನಿತ್ಯವೂ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ದಾಖಲಾಗುತ್ತಿರುತ್ತಾರೆ.
ಕಳೆದ ಎರಡು ವರ್ಷಗಳ ಈಚೆಗೆ ಕುಶಾಲನಗರ ಹೊಸ ತಾಲೂಕಾಗಿ ಘೋಷಣೆಗೊಳ್ಳುವ ಮೊದಲೇ ಇದು ತಾಲೂಕು ಆಸ್ಪತ್ರೆಗಿಂತಲೂ ಹೆಚ್ಚಿನ ರೋಗಿಗಳಿಗೆ ಸೌಲಭ್ಯ ನೀಡುತ್ತಾ ಬಂದಿದೆ. ಹೆಚ್ಚಿನ ಜನಸಂಖ್ಯೆಯುಳ್ಳ ಕುಶಾಲನಗರದಲ್ಲಿ ಆರೋಗ್ಯ ಸೇವೆಗೆ ಅನು ಖಾಸಗಿ ಆಸ್ಪತ್ರೆಗಳು ತೆರೆದುಕೊಳ್ಳದ ಕಾರಣ ಬಡವನಿಂದ ಶ್ರೀಮಂತನವರೆಗೆ ಎಲ್ಲಾ ಹಂತದ ಜನರು ಚಿಕಿತ್ಸೆಗೆ ಈ ಆಸ್ಪತ್ರೆಗೆ ಧಾವಿಸುವ ಕಾರಣ ಬಂದವರಿಗೆ ಸೂಕ್ತ ಚಿಕಿತ್ಸೆ ಹಾಗು ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ನೀಡಲು ೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ತುರ್ತಾಗಿ ೧೦೦ ಹಾಸಿಗೆಗಳ ಆಸ್ಪತ್ರೆಗಳ ಆಸ್ಪತ್ರೆಯಾಗಿ ರೂಪಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಸೂಕ್ತ ಜಾಗವನ್ನು ಒದಗಿಸಬೇಕಿದೆ.
ಒಟ್ಟಾರೆ ಜಿಲ್ಲಾಡಳಿತ ಕೂಡಲೇ ಕುಶಾಲನಗರದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸೂಕ್ತ ಸ್ಥಳಾವಕಾಶ ಒದಗಿಸುವ ಮೂಲಕ ಸರ್ಕಾರದಿಂದ ಬಿಡುಗಡೆಯಾಗಿರುವ ೩೦ ಕೋಟಿ ರೂಗಳನ್ನು ಸದುಪಯೋಗಪಡಿಸಲು ಮುಂದಾಗಬೇಕಿದೆ.
ಸೂಕ್ತ ಜಾಗ ಎಲ್ಲಿದೆ ?: ಆಸ್ಪತ್ರೆಯ ಈಗ ಇರುವ ಜಾಗದಲ್ಲಿ ಮುಂದುವರೆದ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಜಾಗವಿಲ್ಲ. ಹಾಗಾಗಿ ಆಸ್ಪತ್ರೆಯ ಅಧೀನದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂದರೆ ಆಸ್ಪತ್ರೆಯ ಸಿಬ್ಬಂದಿಗಳ ವಸತಿ ಗೃಹಗಳಿರುವ ಪ್ರದೇಶದಲ್ಲಿ ಒಂದು ಎಕರೆ ಜಾಗವಿದ್ದು, ಅದು ಲಯನ್ಸ್ ಸಂಸ್ಥೆಯೊಂದಿಗೆ ವಿವಾದದಲ್ಲಿದೆ. ಒಂದು ವೇಳೆ ಈ ಜಾಗ ಲಭ್ಯವಾದರೂ ಕೂಡ ಈಗಾಗಲೇ ಮೂರು ಬಾರಿ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಬಂದ ಕಾರಣ ನದಿ ಪಾತ್ರದ ಒಂದಿಷ್ಟು ಜಾಗವನ್ನು ಹೊರತು ಪಡಿಸಿ ಉಳಿದ ಜಾಗದಲ್ಲಿ ೧೦೦ ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಾಲದು ಎಂಬುದು ಆರೋಗ್ಯ ಅಧಿಕಾರಿಗಳ ವಾದ. ಹಾಗಾಗಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಕುಶಾಲನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ೪ ಎಕರೆ ಜಾಗಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಹಾಗಾಗಿ ಬದಲೀ ಜಾಗವನ್ನು ನೀಡವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಇನ್ನಷ್ಟೆ ಮತ್ತೆ ಹೊಸದಾದ ಪ್ರಸ್ತಾವನೆ ಸಲ್ಲಿಸಬೇಕಿದೆ.
ಕುಶಾಲನಗರದ ಸರ್ಕಾರಿ ಆಸ್ಪತ್ರೆ ಬಳಿಯಿರುವ ಜಾಗ ೧೦೦ ಹಾಸಿಗೆಯುಳ್ಳ ಹೊಸ ಆಸ್ಪತ್ರೆ ಕಟ್ಟಲು ಸುರಕ್ಷಿತವಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ವರದಿ ನೀಡಿರುತ್ತಾರೆ. ಹಾಗಾಗಿ ಬದಲಿ ನೀರಾವರಿ ನಿಗಮದ ಜಾಗ ಕೇಳಿದ್ದೆವು. ಇದೀಗ ಆ ಇಲಾಖೆಯವರು ಕೂಡ ನಮ್ಮ ಮನವಿ ತಿರಸ್ಕರಿಸಿದ್ದಾರೆ. ಇದೀಗ ನಮಗೆ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ೪ ಎಕರೆ ಜಾಗವನ್ನು ನೀಡಿದಲ್ಲಿ ನಮಗೆ ಸುಸಜ್ಜಿತವಾದ ಆಸ್ಪತ್ರೆ ಕಟ್ಟಡ ಹಾಗು ವೈದ್ಯ ಸಿಬ್ವಂದಿಗಳ ವಸತಿ ಸಮುಚ್ಛಯ ನಿರ್ಮಿಸಲು ಅನುಕೂಲವಾಗುತ್ತದೆ.-ಡಾ.ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಕುಶಾಲನಗರದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದಲ್ಲಿ ಹಲವಾರು ರೋಗಿಗಳಿಗೆ ಅನುಕೂಲವಾಗುತ್ತದೆ. ಅದರಲ್ಲೂ ಬಡ ರೋಗಿಗಳಿಗೆ ಮಡಿಕೇರಿ ಅಥವಾ ಮೈಸೂರಿಗೆ ತೆರಳೋದು ತಪ್ಪುತ್ತದೆ. ಅಂದಾಜು ೩೦ ಕೋಟಿ ಹಣವಿದ್ದು ಸ್ಥಳ ಇಲ್ಲದಿರುವುದು ವಿಪರ್ಯಾಸ. ಅಂದಾಜು ೩೫೦ ರಿಂದ ೪೦೦ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಸೂಕ್ತ ಸ್ಥಳ ಸಿಕ್ಕಲ್ಲಿ ಹಲವಾರು ರೋಗಿಗಳ ಪ್ರಾಣ ಉಳಿಸಬಹುದು.-ವೈಶಾಖ್, ಸಾರ್ವಜನಿಕರು, ಕುಶಾಲನಗರ